ಮಂಡ್ಯ ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಮುಂಭಾಗ ಕಾಳಿಕಾಂಭ ಶ್ರಮಿಕನಗರದ ನಿವಾಸಿಗಳಿಂದ ಪ್ರತಿಭಟನೆ ನಡೆಸಲಾಯಿತು.·
- ಮಳೆ ನೀರು ನಿಂತಿರುವ ಪರಿಣಾಮ ಚೇಳು, ಹಾವು ಸೇರಿದಂತೆ ವಿಷಜಂತುಗಳು ಮನೆಗಳಿಗೆ ನುಗ್ಗುತ್ತಿದೆ.
- ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಬಡ ಜನರು ಬೀದಿಗೆ ಬಿದ್ದಿದ್ದಾರೆಂದು ಆಕ್ರೋಶ
ಮಂಡ್ಯ: ಮನೆಗಳ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ಜನಶಕ್ತಿ, ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಕಾಳಿಕಾಂಭ ಶ್ರಮಿಕನಗರದ ನಿವಾಸಿಗಳಿಂದ ಪ್ರತಿಭಟನೆ ನಡೆಸಲಾಯಿತು.
ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ನಿವಾಸಿಗಳು, ಕಾಳಿಕಾಂಭ ದೇವಸ್ಥಾನದ ಹಿಂಭಾಗದ ಕೊಳಚೆ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಅಲ್ಲಿನ ನಿವಾಸಿಗಳ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಗುಡಿಸಲು ಹಾಗೂ ಸಣ್ಣ ಮನೆಗಳ ಛಾವಣಿಯ ಸೀಟು ಮತ್ತು ಗರಿಗಳು ಗಾಳಿಗೆ ತೂರಿ ಹೋಗಿದ್ದು, ಮಳೆನೀರು ಮನೆಗಳೊಳಗೆ ನುಗ್ಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮಳೆ ನೀರು ನಿಂತಿರುವ ಪರಿಣಾಮ ಚೇಳು, ಹಾವು ಸೇರಿದಂತೆ ವಿಷಜಂತುಗಳು ಮನೆಗಳಿಗೆ ನುಗ್ಗುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರ ಆರೋಗ್ಯ ಮತ್ತು ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ. ಭಯ ಮತ್ತು ಅಸುರಕ್ಷಿತ ವಾತಾವರಣದಲ್ಲಿ ಜನರು ದಿನ ಕಳೆಯುವಂತಾಗಿದೆ ಎಂದು ಹೇಳಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಕಾಳಿಕಾಂಭ ಶ್ರಮಿಕ ನಗರದ ನಿವಾಸಿಗಳ ಪರವಾಗಿ ಸಲ್ಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 2025ರ ಸೆ.19ರಂದು ಹೈಕೋರ್ಟ್ ತೀರ್ಪು ನೀಡಿದ್ದರೂ ಸುಮಾರು ಒಂಬತ್ತು ತಿಂಗಳು ಕಳೆದರೂ ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನಿರ್ಮಾಣ ಕಾಮಗಾರಿ ಆರಂಭಿಸಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಬಡ ಜನರು ಬೀದಿಗೆ ಬಿದ್ದಿದ್ದು, ಮಾನವೀಯ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಬಡಜನ ವಿರೋಧಿ ನೀತಿಯನ್ನು ಖಂಡಿಸಿ ಹೋರಾಟ ಆರಂಭಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜು, ಸುಬ್ರಹ್ಮಣ್ಯ, ಜನಾರ್ದನ ಇತರರಿದ್ದರು.