ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. 
ಮಂಡ್ಯ

ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ: ಭ್ರಷ್ಟಾಚಾರ ವಿರೋಧಿಸಿ ಈಡುಗಾಯಿ ಚಳವಳಿ

ಮಂಡ್ಯ: ಭ್ರಷ್ಟಾಚಾರ ವಿರೋಧಿ ದಿನಾಚರಣೆ ಅಂಗವಾಗಿ ಕನ್ನಡಪರ ಸಂಘಟನೆಗಳಿಂದ ನಗರದಲ್ಲಿ ಈಡುಗಾಯಿ ಒಡೆದು ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜು ನೇತೃತ್ವದಲ್ಲಿ ಜಮಾಯಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ಇಡುಗಾಯಿ ಒಡೆದು ಶಾಸನ ಸಭೆ, ವಿಧಾನ ಪರಿಷತ್, ಲೋಕಸಭೆಗಳು ಭ್ರಷ್ಟರಿಂದ ತುಂಬಿ ತುಳುಕುತ್ತಿದ್ದು, ಭ್ರಷ್ಟಾಚಾರ ನಿಲ್ಲದಿದ್ದರೆ ದೇಶಕ್ಕೆ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟ್ಯಂತರ ರೂ ಖರ್ಚು ಮಾಡಿ ಗೆದ್ದು ಬಂದಿರುವ ಜನಪ್ರತಿನಿಧಿಗಳು ಭ್ರಷ್ಟಾಚಾರ ನಡೆಸಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಮೂರೂ ಪಕ್ಷಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಹೆಚ್ಚುತ್ತಿರುವ ಭ್ರಷ್ಟಾಚಾರ ನಿಗ್ರಹಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಬೇಕು. ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವಾಗಿದೆ. ಭ್ರಷ್ಟಾಚಾರಿಗಳು ಪರಮ ಪವಿತ್ರದ ರೀತಿ ನಡೆದುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರಿಗಳನ್ನು ಹೊಗಳಲಾಗುತ್ತಿದೆ. ಜೈಲಿನಿಂದ ಬಂದ ಭ್ರಷ್ಟಾಚಾರಿಗಳಿಗೆ ಹಾರ, ತುರಾಯಿ ಹಾಕಿ ಸ್ವಾಗತಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾನ, ಮರ್ಯಾದೆ, ಗೌರವ ಈ ಪದಗಳು ಸವಕಲು ನಾಣ್ಯವಾಗಿದೆ. ಆಡಳಿತ ಅಧಿಕಾರಿಗಳು, ರಾಜಕಾರಣಿಗಳು, ಭ್ರಷ್ಟಾಚಾರದಲ್ಲಿ ಒಂದಾಗಿದ್ದಾರೆ. ಪರಮ ಪವಿತ್ರವಾದಂತಹ ಚುನಾವಣೆ ಭ್ರಷ್ಟಾಚಾರ ಕೂಪವಾಗಿದೆ. ತತ್ವ-ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಭ್ರಷ್ಟರಿಗೆ ಜೆಸಿಬಿಯಲ್ಲಿ ಹಾರ ತುರಾಯಿಗಳನ್ನು ಹಾಕಲಾಗುತ್ತಿದೆ. ನೂರಾರು ಕೋಟಿ ರೂ ಖರ್ಚು ಮಾಡಿ ಸಭೆ-ಸಮಾರಂಭಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ನಗರಸಭೆ ಮಾಜಿ ಸದಸ್ಯೆ ಸೌಭಾಗ್ಯಾ, ಬೆಟ್ಟಹಳ್ಳಿ ಮಂಜುನಾಥ್, ಎಚ್.ವಿ.ಗಿರೀಶ್‌ಗೌಡ, ಪಾರ್ಥಸಾರಥಿ, ನಾರಾಯಣಸ್ವಾಮಿ, ಮಣಿಕಂಠ, ಜಗದೀಶ್, ವಿ.ಎನ್.ಪುಪ್ಪಲತಾ, ಗಂಗಾಧರ, ಆರ್.ಜೆ.ಅರ್ಜುನ್, ಕೆ.ಜಯರಾಂ, ಕಲೀಂ ಪಾಷ ಇತರರಿದ್ದರು.