ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಶೀಘ್ರವೇ ಕೆರೆ ಕಟ್ಟೆ ತುಂಬಿಸಲು ಒತ್ತಾಯ
ಹೇಮಾವತಿ ನಾಲೆಗಳಿಗೆ ನೀರು ಹರಿಸುವ ಜತೆಗೆ ಕೆರೆ ಕಟ್ಟೆಗಳಿಗೆ ತುಂಬಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗಿ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಮುಂಗಾರು ಮಳೆ ಕೊರತೆಯಿಂದ ಆವರಿಸಿದ್ದ ಬರದ ಛಾಯೆ ಕಣ್ಮರೆಯಾಗಿ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನ ಮೇಲುಕೋಟೆ, ಚಿನಕುರಳಿ ಹೋಬಳಿ ಮತ್ತು ಮಂಡ್ಯ ತಾಲೂಕಿನ ಬಸರಾಳು ಹೋಬಳಿ ಪ್ರದೇಶದ ಜನತೆ ಹೇಮಾವತಿ ನದಿ ನೀರನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ. ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿ ಕೆರೆ ಕಟ್ಟೆಗಳೆಲ್ಲ ಒಣಗಿ ಹೋಗಿ ಬೆಳೆ ಹಾಕಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಆದರೆ ಇದೀಗ ಮಳೆಯಾಗಿ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸಂಪೂರ್ಣ ಭರ್ತಿಯಾಗುತ್ತಿರುವುದು ರೈತರಲ್ಲಿ ಬೆಳೆ ಹಾಕಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಶಾಭಾವನೆ ಮೂಡಿಸಿದೆ. ಆದರೆ, ರಾಜ್ಯ ಸರ್ಕಾರ, ಚುನಾಯಿತ ಜನಪ್ರತಿನಿಧಿ ಗಳು ಹೇಮಾವತಿ ಅಚ್ಚುಕಟ್ಟ ಪ್ರದೇಶದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ವಿಚಾರವಾಗಿ ಮಾತ್ರ ದನಿ ಎತ್ತುವ ಶಾಸಕರು ಸಚಿವರು ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರ ಬಗ್ಗೆ ಮೌನ ವಹಿಸಿದ್ದಾರೆ. ಇವರನ್ನು ನಂಬಿ ಓಟು ಕೊಟ್ಟ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ. ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರುವಾಗುವ ಸನ್ನಿವೇಶ ಉದ್ಭವವಾಗಿದ್ದರಿಂದ ರೈತರಿಗೆ ಬೆಳೆ ಹಾಕದಂತೆ ಸರ್ಕಾರ ಮನವಿ ಮಾಡಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಎಲ್ಲಡೆ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಭರ್ತಿಯಾಗುವ ಹಂತಕ್ಕೆ ತಲುಪಿವೆ. ವಿನಾಕಾರಣ ನದಿಗೆ ನೀರು ಹರಿಸಲಾಗುತ್ತಿದ್ದು, ನಾಲೆಗಳಿಗೆ ಬಿಟ್ಟಿಲ್ಲ ಎಂದು ಕಿಡಿಕಾರಿದರು.
ನಾಲೆಗಳಲ್ಲಿ ನೀರು ಹರಿಯದೆ ಕೆರೆಕಟ್ಟೆಗಳು ನೀರಿಲ್ಲದೆ ಒಳಗಿರುವುದರಿಂದ ರೈತರು ಮುಂಗಾರು ಬೆಳೆಗೆ ಒಟ್ಟಲು ಹಾಕಿಲ್ಲ. ಜತೆಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಜಲಾಶಯದಲ್ಲಿ ನೀರಿದ್ದರೂ ಸರ್ಕಾರ ಯಾವುದೇ ಕ್ರಮ ವಹಿಸದೆ ಇರುವುದರಿಂದ ರೈತರ ಬದುಕು ಶೋಚನೀಯವಾಗಿದೆ. ಬೇಸಾಯಕ್ಕೆ ಅನುಕೂಲ ಮಾಡಿಕೊಡಲು ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರೊದಗಿಸಲು ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು. ಜಮೀನಿನಲ್ಲಿ ರೈತರು ಬೆಳೆ ಹಾಕಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಎಂ.ವಿ ಕೃಷ್ಣ, ಕರ್ನಾಟಕ ಸಂವಿಧಾನ ಸೇನೆ ಅಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಡಿ.ಅಶೋಕ್, ರೇಣುಕಮ್ಮ, ಲತಾ, ನಾಗರಾಜು, ನಂದೀಶ್, ದರ್ಶನ್, ಆಟೋ ಚಂದ್ರು, ಪ್ರದೀಪ್, ನಿರಂಜನ್, ಜಿ.ಕೆ.ಕುಮಾರ್, ಬೈರಾ ಇತರರಿದ್ದರು.