ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
- ಕಳೆದ 15 ರಿಂದ 20 ವರ್ಷದಿಂದ ಕಡಿಮೆ ಸಂಬಳಕ್ಕೆ ವಿವಿಧ ಹುದ್ದೆಯಲ್ಲಿ ಕೆಲಸ
- ಅಧಿಕಾರಿಗಳು ಹಾಗೂ ಸಂಘದ ಮುಖಂಡರೊಳಗೊಂಡಂತೆ ಸಭೆ ಕರೆಯಬೇಕೆಂದು ಡಿಸಿಗೆ ಮನವಿ
ಮಂಡ್ಯ: ಕನಿಷ್ಟ ವೇತನ ಜಾರಿಗೊಳಿಸಬೇಕು ಹಾಗೂ ಖಾಯಂ ಕೆಲಸದ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ನಲ್ಲಿ ಕಳೆದ 15 ರಿಂದ 20 ವರ್ಷದಿಂದ ಕಡಿಮೆ ಸಂಬಳಕ್ಕೆ ವಿವಿಧ ಹುದ್ದೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಇವರಿಗೆ ಯಾವುದೇ ಭದ್ರತೆ ಇಲ್ಲ. ಜತೆಗೆ ಕೆಲ ಗುತ್ತಿಗೆದಾರರು, ವಾರ್ಡನ್‌ಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ್ನು ಶೋಷಣೆ ಮಾಡುತ್ತಿರುತ್ತಾರೆ. ಮನಸ್ಸಿಗೆ ಬಂದಂತೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಪರಿಷ್ಕರಣೆ ಮಾಡಿರುವ ಕನಿಷ್ಟ ವೇತನ ಜಾರಿಗೊಳಿಸಬೇಕು. ಅಂತೆಯೇ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಂಘದ ಮುಖಂಡರೊಳಗೊಂಡಂತೆ ಸಭೆ ಕರೆಯಬೇಕೆಂದು ಡಿಸಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸಂತೋಷ್, ಪ್ರಸನ್ನಕುಮಾರ್, ಜಯಶೀಲಾ, ಗಿರೀಶ್, ಚೈತ್ರಾ, ಮನು, ಚಿಕ್ಕಣ್ಣ, ಭರತ್, ನಾಗಮ್ಮ ಇತರರಿದ್ದರು.