ಹೋರಾಟಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಕೂಡಲೇ ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮದ್ದೂರು ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸುನಂದಾ ಜಯರಾಮು, ಚಂದ್ರಶೇಖರ್, ಸೊ.ಶಿ.ಪ್ರಕಾಶ್, ಪ್ರಸನ್ನ, ವಿನೋದ್ ಬಾಬು ಇದ್ದರು.
ಮದ್ದೂರು: ಶಾಂತಿಯುತ ಧರಣಿ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಪೊಲೀಸ್ ಅಧಿಕಾರಿ, ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೂಡಲೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಗೊರವನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಅಧಿಕಾರಿಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು, ಗೊರವನಹಳ್ಳಿ, ಗೆಜ್ಜಲಗೆರೆ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮಸ್ಥರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕಿ ಸುನಂದಾ ಜಯರಾಮ್ ಮಾತನಾಡಿ, ಮದ್ದೂರು ನಗರಸಭೆಗೆ ಗೊರವನಹಳ್ಳಿ ಗ್ರಾಮವನ್ನು ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಕಳೆದ 66 ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸಿಕೊಂಡು ಬರಲಾಗುತಿತ್ತು. ಎರಡನೇ ಶನಿವಾರದಂದು ಸಂಜೆ 4.30 ಸಮಯದಲ್ಲಿ ಏಕಾಏಕಿ 200ಕ್ಕೂ ಹೆಚ್ಚು ಪೊಲೀಸರು ಪಂಚಾಯಿತಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಗೊರವನಹಳ್ಳಿ ಗ್ರಾಪಂ ಕಚೇರಿಯಲ್ಲಿ ಇರಿಸಿದ್ದ ಕಡತಗಳನ್ನು ತೆಗೆದುಕೊಂಡು ಹೋಗಲು ಮುಂದಾದರು. ಈ ವೇಳೆ ಧರಣಿನಿರತರು ನ್ಯಾಯಾಲಯದಲ್ಲಿ ಪ್ರಕರಣ ಇದ್ದು ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ದಾಖಲೆಗಳ ಸ್ಥಳಾಂತರದ ಕ್ರಮ ಸರಿಯಾದುದ್ದಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯಿರಿ. ನಮ್ಮ ಗ್ರಾಮ ಪಂಚಾಯಿತಿ ಗ್ರಾಮಪಂಚಾಯಿತಿ ಆಗೆಯೇ ಉಳಿಸಿಕೊಳ್ಳುವುದು ನಮ್ಮ ಸತ್ಯಾಗ್ರಹದ ಉದ್ದೇಶ. ಇದು ಗಾಂಧಿ ಕನಸಿನ ಗ್ರಾಮಸ್ವರಾಜ್ಯದ ಆಶಯ ಕೂಡ ಎಂದು ಹೇಳಿ ವಿವರಿಸುತ್ತಿರುವಾಗ ಯಾವ ಸೂಚನೆಯನ್ನು ನೀಡದೆ ಪೊಲೀಸರು ಚಳವಳಿನಿರತರನ್ನು ವಸ್ತುಗಳ ರೂಪದಲ್ಲಿ ಎತ್ತಿ ಎಸೆದು, ಮನಬಂದಂತೆ ತಳ್ಳಿ, ಲಾಠಿಯಿಂದ ಹೊಡೆದು ಸಿನಿಮೀಯಾ ಮಾದರಿಯಲ್ಲಿ ಅಮಾನವೀಯಾವಾಗಿ ನಡೆದುಕೊಂಡರು. ಇದು ಸರಿಯಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಪಂಗಳನ್ನು ಸೇರ್ಪಡೆ ಮಾಡುವ ನಿರ್ಧಾರ ಕೈ ಬಿಡುವರೆಗೂ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಗೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾಕಾರರು, ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಸುನಂದಾ ಜಯರಾಮು, ಸೊ.ಶಿ.ಪ್ರಕಾಶ್, ವಿನೋದ್‌ಬಾಬು, ಶ್ರೀಲತಾ, ಸಿದ್ದರಾಜಣ್ಣ, ಸುರೇಶ್, ರವಿ, ರಾಜಣ್ಣ, ಉಮೇಶ್, ಪ್ರಸನ್ನ, ಮೋಹನ್, ಅವಿನಾಶ್, ಮಹೇಶ್, ಸಂತೋಷ್, ಶಿವಣ್ಣ, ಪ್ರಮೋದ್, ಜಿ.ಸಿ.ಶಿವಪ್ಪ, ಶಿವರಾಮು, ಸಂಪತ್ ಸೇರಿದಂತೆ ಇತರರು ಇದ್ದರು.