ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. 
ಮಂಡ್ಯ

ಬೆಳೆ ಉಳಿಸಿಕೊಳ್ಳಲು ಬೀದಿಗಿಳಿದ ರೈತರು: ನಾಲೆಗೆ ನೀರು ಹರಿಸುವಂತೆ ಹಕ್ಕೊತ್ತಾಯ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಎದುರಾಗಿದೆ ಮುಂಗಾರು ಕೈಕೊಡುವ ಆತಂಕ
  • ಜೂನ್ ಮುಗಿಯುತ್ತಿದ್ದರೂ ನಿರೀಕ್ಷೆಯಂತೆ ಮಳೆಯಾಗಿಲ್ಲ
ಮಂಡ್ಯ: ಮುಂಗಾರು ಕೈಕೊಡುವ ಆತಂಕ ಎದುರಾಗಿದೆ. ಪರಿಣಾಮ ಜೂನ್ ಮುಗಿಯುತ್ತಿದ್ದರೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದರಿಂದಾಗಿ ಬೆಳೆ ಒಣಗಲಾರಂಭಿಸಿವೆ. ಸಾಲ ಮಾಡಿ ಬೆಳೆದಿರುವ ಬೆಳೆ ಉಳಿಸಿಕೊಳ್ಳಲು ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಮಂಡ್ಯ ನಗರ ಹಾಗೂ ಕೆಆರ್‌ಎಸ್‌ನಲ್ಲಿ ರೈತ ಸಂಘದಿಂದ ಧರಣಿ ನಡೆಸಲಾಗಿದೆ. ಅಂತೆಯೇ ಕೆಆರ್‌ಎಸ್ ಅಣೆಕಟ್ಟೆಯಿಂದ ಕೂಡಲೇ ನಾಲೆಗೆ ನೀರು ಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆ ಹಾಗೂ ಜನ-ಜಾನುವಾರುಗಳ ಕುಡಿಯುವ ಅಗತ್ಯತೆಗಾಗಿ ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ನಂತರ ನೀರಾವರಿ ಇಲಾಖೆ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಕೊರತೆ ಉಂಟಾಗಿದೆ. ಈ ಭಾಗದಲ್ಲಿರುವ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕುಸಿದಿದೆ. ಆದರೆ ಇರುವ ನೀರನ್ನು ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಆದರೆ ಸರ್ಕಾರ ಮತ್ತು ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಮಂಡ್ಯ ಜಿಲ್ಲೆಯಲ್ಲೂ ಮಳೆ ಕೊರತೆಯಿಂದಾಗಿ ಬೆಳೆದು ನಿಂತಿರುವ ಬೆಳೆಗಳು ಒಣಗಲಾರಂಭಿಸಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಭತ್ತ ಮತ್ತು ಕಬ್ಬಿಗೆ ನೀರಿನ ಅಗತ್ಯತೆ ಇದೆ. ರೇಷ್ಮೆ, ತೆಂಗು ಇತರೆ ಬೆಳೆಗಳೂ ಸಹ ಒಣಗಲಾರಂಭಿಸಿವೆ. ಇಂತಹ ಪರಿಸ್ಥಿತಿಯಿಂದಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಏಕ ಕಾಲದಲ್ಲಿ ಜಿಲ್ಲೆಯ ಐದೂ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭವಾಗಬೇಕಿದ್ದು, ಕಬ್ಬಿನ ಬೆಳೆಗೆ ಇನ್ನೂ ಸ್ವಲ್ಪ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಜಿಲ್ಲೆಯ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾದರೆ ರೈತರು ಮತ್ತಷ್ಟು ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ. ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ತಕ್ಷಣದಿಂದಲೇ ನಾಲೆಗಳಲ್ಲಿ ನೀರು ಹರಿಸುವಂತೆ ಆಗ್ರಹಿಸಿದರು.
ಈಗಾಗಲೇ ಬರಗಾಲದ ಪರಿಸ್ಥಿತಿ ಬಂದಂತಿದೆ. ಆದ್ದರಿಂದ ಕೂಡಲೇ ಜಿಲ್ಲೆಯ ರೈತರ ನೆರವಿಗೆ ಬರಲು ಕೃಷ್ಣರಾಜಸಾಗರ ಜಲಾಶಯದಿಂದ ತಕ್ಷಣದಿಂದಲೇ ನಾಲೆಗಳಲ್ಲಿ ನೀರು ಹರಿಸುವ ಮೂಲಕ ಜಿಲ್ಲೆಯ ಸಮಸ್ತ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಎಸ್.ಮಂಜೇಶ್‌ಗೌಡ, ಶಿವಳ್ಳಿ ಚಂದ್ರಶೇಖರ್, ಕೀಲಾರ ಸೋಮಶೇಖರ್, ಜವರೇಗೌಡ, ಸುರೇಶ್, ನಾಗರಾಜು, ಕರಿಯಪ್ಪ, ಮಹೇಂದ್ರ, ಕರವೇ ಜಯರಾಂ, ನಾಗಣ್ಣಗೌಡ, ಕುದರಗುಂಡಿ ನಾಗರಾಜು, ದೊರೆಸ್ವಾಮಿ, ಕೆ.ಎಂ.ನಂಜುಂಡಯ್ಯ ಇತರರಿದ್ದರು.