ಮಂಡ್ಯ ನಗರದ ಜಿಪಂ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. 
ಮಂಡ್ಯ

ಬೆಳೆದು ನಿಂತ ಬೆಳೆಗೆ ನೀರು ಹರಿಸಲು ಆಗ್ರಹ: ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವ
  • ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಮನವಿ ಸ್ವೀಕಾರ
ಮಂಡ್ಯ: ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಕೆಆರ್‌ಎಸ್ ಮತ್ತು ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದ ರೈತಸಂಘದ ಕಾರ್ಯಕರ್ತರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಮೊಳಗಿಸಿದರು. ಒಂದೆಡೆ ಮಳೆ ಕೊರತೆಯಾಗಿದೆ. ಮತ್ತೊಂದೆಡೆ ಕೆರೆಕಟ್ಟೆಗಳು ಬತ್ತುತ್ತಿವೆ. ಇದರಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇದರಿಂದ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಗುಣಮಟ್ಟದ ವಿದ್ಯುತ್ ಸರಬರಾಜಾಗದ ಕಾರಣ ಕೃಷಿ ಪಂಪ್‌ಸೆಟ್‌ಗಳಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದ ಕೃಷಿ ಪಂಪ್‌ಸೆಟ್ ಅವಲಂಬಿತ ಜಮೀನುಗಳಲ್ಲಿನ ಬೆಳೆಗಳಿಗೂ ನೀರಿನ ಅಭಾವ ಎದುರಾಗಿದೆ. ಈ ಮಧ್ಯೆ ಭತ್ತ ಕಟಾವು ಯಂತ್ರಗಳ ಮಾಲೀಕರು ಬೇಕಾಬಿಟ್ಟಿ ದರ ವಿದುರಿಸುತ್ತಿದ್ದಾರೆ. ಇದಕ್ಕೆ ನಿಯಂತ್ರಣ ಹೇರಬೇಕೆಂದು ಆಗ್ರಹಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 7 ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಈ ಹಿಂದೆ ಇದ್ದಂತೆಯೇ ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕಗಳ ಅಕ್ರಮ-ಸಕ್ರಮಕ್ಕೆ ರೈತರ ಪಾಲನ್ನು ಪಡೆದು ಉಳಿದ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹಾಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಮತ್ತು ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆಆರ್‌ಎಸ್, ಹೇಮಾವತಿ ಅಣೆಕಟ್ಟೆಗಳ ಮೂಲಕ ನಾಳೆಗಳಿಗೆ ಕನಿಷ್ಠ ಎರಡು ಕಟ್ಟು ನೀರು ಹರಿಸಬೇಕು. ಆ ಮೂಲಕ ರೈತರನ್ನು ರಕ್ಷಿಸಬೇಕು. ಪ್ರಕೃತಿ ವಿಕೋಪದಿಂದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿರುವ ಸಂಬಂಧ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಭತ್ತ ಕಟಾವು ಯಂತ್ರಗಳಿಗೆ ಜಿಲ್ಲಾದ್ಯಂತ ಏಕ ರೀತಿಯ(ಪ್ರತಿ ಗಂಟೆಗೆ 2200 ರೂ) ಬಾಡಿಗೆ ದರ ನಿಗದಿಪಡಿಸಬೇಕು. ಈ ಸಂಬಂಧ ಯಂತ್ರಗಳ ಮಾಲೀಕರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕು. ಬ್ಯಾಂಕುಗಳು ಮತ್ತು ಮತ್ತು ಮೈಕ್ರೋ ಫೈನಾನ್ಸ್ ಹಾವಳಿ ತಡೆಗಾಗಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಕೆ.ಆರ್.ಪೇಟೆಯಲ್ಲಿ ವಿದ್ಯುತ್ ಕೊರತೆ ನೀಗಿಸಲು ಕನಿಷ್ಟ ಎರಡು ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಖಜಾಂಚಿ ಎಸ್.ಕೆ.ರವಿಕುಮಾರ್‌ಗೌಡ, ಜಿ.ಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಮರುವನಹಳ್ಳಿ ಶಂಕರ್, ವಿಜಯಕುಮಾರ್, ಕೆನ್ನಾಳು ನಾಗರಾಜು, ಬೋರಾಪುರ ಶಂಕರೇಗೌಡ, ಮಳವಳ್ಳಿ ದೇವರಾಜು, ಶ್ರೀರಂಗಪಟ್ಟಣ ಶಂಭುಗೌಡ, ಪಾಂಡವಪುರ ತಾಲೂಕು ರೈತಸಂಘದ ಅಧ್ಯಕ್ಷ ಮಂಜುನಾಥ್, ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಇತರರಿದ್ದರು.