ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.  
ಮಂಡ್ಯ

ರೈತ ಸಂಘದಿಂದ ಪ್ರತಿಭಟನೆ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲು ಆಗ್ರಹ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮೈಷುಗರ್ ಕಾರ್ಖಾನೆಯಲ್ಲಿ ಅವ್ಯವಹಾರ
  • ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ
  • ರೈತ ಹಾಗೂ ವಿವಿಧ ಸಂಘಟನೆಗಳ ಆಗ್ರಹ
ಮಂಡ್ಯ: ಮೈಶುಗರ್ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚಿಸಬೇಕು ಹಾಗೂ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಕೊಡಬೇಕಿರುವ ಹಣ ಪಾವತಿಗೆ ಒತ್ತಾಯಿಸಿ ನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಧರಣಿ ನಡೆಸಿದ ರೈತ ಸಂಘಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೈಶುಗರ್ ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಅಂತೆಯೇ ಅಂದಾಜು 1.40 ಕೋಟಿ ರೂನಷ್ಟು ಬಾಕಿ ಹಣವನ್ನು ರೈತರಿಗೆ ನೀಡಬೇಕು. ಈ ಬಗ್ಗೆ ತುರ್ತು ಕ್ರಮ ವಹಿಸಬೇಕು. ಇದಲ್ಲದೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿಲ್ಲಿಸಿ ಹಲವು ತಿಂಗಳಾಗಿದೆ. ಆದರೂ ಸ್ವಚ್ಛತೆ ಹಾಗೂ ದುರಸ್ತಿ ಕೆಲಸವಾಗಿಲ್ಲ. ಇನ್ನಾದರೂ ಸ್ವಚ್ಛತೆ ಹಾಗೂ ದುರಸ್ತಿಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಕವಾಗಿರುವ ಸಮಿತಿಯಲ್ಲಿ ಜಿಲ್ಲೆಯ ಯಾವುದೇ ರೈತ ಪ್ರತಿನಿಧಿಗಳಿಲ್ಲ. ಇದಲ್ಲದೆ ಭ್ರಷ್ಟಚಾರದ ಆರೋಪ ಎದುರಿಸುತ್ತಿರುವ ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಹಾಗೂ ಎಂ.ಡಿ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸದೆ ನಿಷ್ಟಕ್ಷಪಾತ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯಲ್ಲಿ ಬಹುಕೋಟಿ ಹಗರಣಕ್ಕೆ ಕಾರಣರಾದ ಈ ಹಿಂದಿನ ಅಧ್ಯಕ್ಷರ ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ ನೀಡಿದ್ದರು ಈವರೆಗೂ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಆದೇಶ ಹೊರಡಿಸಿಲ್ಲ. ಅಧಿಕಾರಿಗಳು ಹಾಗೂ ಕಾರ್ಖಾನೆಯ ಅಧ್ಯಕ್ಷರ ಭ್ರಷ್ಟಾಚಾರದಿಂದ ಕಾರ್ಖಾನೆ ನಷ್ಟದ ಹಾದಿಯಲ್ಲಿದೆ. ಜಿಲ್ಲೆಯ ಶಾಸಕರಿಗೆ ಕಾರ್ಖಾನೆ ಕುರಿತು ಯಾವುದೆ ಕಾಳಜಿ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕಾರ್ಖಾನೆಯ ಸರ್ವ ಸದಸ್ಯರ ಸಭೆ ನಡೆಸಿಲ್ಲ. ಕಾರ್ಖಾನೆಯ ಆಗು ಹೋಗುಗಳ ಸಂಬಂಧ ಶ್ವೇತಪತ್ರ ಹೊರಡಿಸಬೇಕು. ಅನಗತ್ಯ ನೇಮಕಾತಿ ಜತೆಗೆ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಈ ಎಲ್ಲದರ ಕುರಿತು ಕ್ರಮ ವಹಿಸದೇ ಸರ್ಕಾರ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಾರ್ಖಾನೆಯನ್ನು ಖಾಸಗೀಕರಿಸುವ ಹುನ್ನಾರಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ ಮಾತನಾಡಿ, 2033ಕ್ಕೆ ಕಾರ್ಖಾನೆ ಸ್ಥಾಪನೆಯಾಗಿ ನೂರು ವರ್ಷ ತುಂಬಲಿದೆ. ಇಂತಹ ವೇಳೆಯಲ್ಲಿ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯಬೇಕಿದೆ. ಕಳೆದ 28 ವರ್ಷದ ಅವಧಿಯಲ್ಲಿ 40 ಜನರನ್ನು ಎಂ.ಡಿ ಯನ್ನಾಗಿ ನೇಮಕ ಮಾಡಲಾಗಿದೆ. ಆದಾಗ್ಯೂ ಕಾರ್ಖಾನೆಯ ಅಭಿವೃದ್ಧಿ ಸಾಧ್ಯವಿಲ್ಲ. ಅಧ್ಯಕ್ಷರು ಸಾರ್ವಜನಿಕ ಆಡಳಿತದ ಲವಲೇಷ ತಿಳಿಯದವರು. ಆಡಳಿತದ ಚುಕ್ಕಾಣಿಯಲ್ಲಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಭ್ರಷ್ಟರನ್ನು ಆಚೆಗಟ್ಟಿ ಕಾರ್ಖಾನೆಯನ್ನು ಸರಿದಾರಿಗೆ ತರಬೇಕಿದೆ. ಇಲ್ಲದಿದ್ದರೆ ಹಳ್ಳಿಗಳಲ್ಲಿ ಜನಾಂದೋಲನಾ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಿರಿಯ ಉಪಾಧ್ಯಕ್ಷ ಕೆ.ಬೋರಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬನ್ನೂರು ನಾರಾಯಣ, ಕೀಳಘಟ್ಟ ನಂಜುಂಡಯ್ಯ, ಮಂಜೇಶ್‌ಗೌಡ, ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ಎಸ್.ಕೆ.ರಾಜುಗೌಡ, ರಾಜೇಂದ್ರ, ಎಂ.ಎನ್.ಚಂದ್ರು ಇತರರಿದ್ದರು.