ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಶುಭದಾಯಿನಿ, ಸುಜಾತಾ ಇತರರು ಇದ್ದರು.
- District Women's Congress
ಮಂಡ್ಯ: ಮಹಿಳಾ ಸಬಲೀಕರಣದ ಹೆಸರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ದೇಶದ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕಾದ ಸಂದರ್ಭದಲ್ಲಿ ಡಿಲಿಮಿಟೇಷನ್ ಎಂಬ ರಾಜಕೀಯ ಆಟವನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಿಲಿಮಿಟೇಶನ್ ಪ್ರಕ್ರಿಯೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಹಾಗೂ ಒಬಿಸಿ, ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. 2023ರಲ್ಲಿ ಸರ್ವ ಪಕ್ಷಗಳಿಂದ ಅಂಗೀಕೃತವಾದಂತಹ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು. ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬೇಕು, ಡಿಲಿಮಿಟೇಶನ್ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಶುಭದಾಯಿನಿ, ಸುಜಾತಾ ಸಿದ್ದಯ್ಯ, ಜ್ಯೋತಿ, ಅನುರಾಧಾ, ಸುಜಾತಮಣಿ, ಶಕುಂತಲಾ ಇತರರಿದ್ದರು.