ದಲಿತ ಹಕ್ಕುಗಳ ಸಮಿತಿ ವತಿಯಿಂದ ಮದ್ದೂರು ನಗರದ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು. ಅರ್.ಕೃಷ್ಣ, ಅಂಬೂಜಿ, ಎಂ.ವಿಜೇಂದ್ರಕುಮಾರ್, ಕೆ.ಶಿವಲಿಂಗಯ್ಯ, ವೆಂಕಟೇಶ್, ಜಯರಾಮಯ್ಯ, ರೇಣುಕಮ್ಮ, ಕೆ.ಬೋರಯ್ಯ, ಟಿ.ಎಲ್.ಮಹೇಶ್ ಇದ್ದರು. 
ಮಂಡ್ಯ

ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ

ಪ್ರಜ್ವಲ್.ಎನ್
ಮದ್ದೂರು: ನಿವೇಶನ ರಹಿತ ದಲಿತರಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು ಹಾಗೂ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ನಿವೇಶನ ನೀಡಬೇಕೆಂದು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣ ಮಾತನಾಡಿ, ನಿವೇಶನ ರಹಿತರು 2025 ರಂದು ವಿವಿಧ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಲಾಗಿತ್ತು, ಅರ್ಜಿಗಳನ್ನು ಪುರಸ್ಕೃತ ಮಾಡಿ ಸರ್ಕಾರದ ಪಟ್ಟಿಗೆ ಸೇರಿಸಲು ಹಾಗೂ ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಮೇ.30 ಗಡುವು ನೀಡಲಾಗಿದೆ. ಆದರೆ, ಇನ್ನೂ ಅನೇಕರು ಅರ್ಜಿ ಸಲ್ಲಿಸದ ಕಾರಣ ದಿನಾಂಕ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ಕೋಟಿಗೂ ಹೆಚ್ಚು ದಲಿತರನ್ನು ಬರಿ ಮತದಾನಕ್ಕೆ ಬಳಸಲಾಗುತ್ತಿದೆ. ದಲಿತರ ಅಭಿವೃದ್ಧಿಗೆ ಬರುತ್ತಿರುವ ಅನುದಾನಗಳು ಸಮರ್ಪಕ ಬಳಕೆಯಾಗದೆ ದಲಿತರ ಅಭಿವೃದ್ಧಿ ಮರೀಚಿಕೆಯಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಖಾಲಿ ಜಾಗ ಮತ್ತು ಮನೆ ಇಲ್ಲದೆ ಇರುವುದು ಕಂಡುಬರುತ್ತಿದೆ. ಇಡೀ ರಾಜ್ಯದಲ್ಲಿ ದಲಿತರಿಗೆ ನಿವೇಶನ, ಗಂಗಾ ಕಲ್ಯಾಣ ಕೊಳವೆ ಬಾವಿ, ಸ್ಮಶಾನ, ಕೃಷಿ ಭೂಮಿ ಮತ್ತು ಸ್ವಯಂ ಉದ್ಯೋಗ ಆರ್ಥಿಕ ಸಹಾಯಕ್ಕಾಗಿ ರಾಜ್ಯಾದ್ಯಂತ ದಲಿತರ ಹಕ್ಕೊತ್ತಾಯ ಭಾಗವಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಲವು ಗ್ರಾಮ ಪಂಚಾಯ್ತಿಗಳ ಮುಂದೆ ಬೇಡಿಕೆ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದರು.
ತಾಲೂಕಿನ ಆತಗೂರು, ಹೆಮ್ಮನಹಳ್ಳಿ, ಸೋಮನಹಳ್ಳಿ ಹಾಗೂ ಸಾದೊಳಲು ಗ್ರಾಮ ಪಂಚಾತಿಗಳಲ್ಲಿ ನ.17, 2025 ರಂದು ಬೇಡಿಕೆ ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಗ್ರಾಮ ಪಂಚಾಯಿತಿಗಳು ನಿವೇಶನ ರಹಿತರಿಗೆ ನಿವೇಶನ ನೀಡಲು ಖಾಲಿ ಜಾಗ ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದರು.
ಸೋಮನಹಳ್ಳಿಯ ಮಲ್ಲಯ್ಯನಗರದ ಕೆ.ಡಿ.ಬಿ. ಜಾಗದಲ್ಲಿ 3 ಎಕರೆ ಸರ್ಕಾರಿ ಜಾಗವಿದ್ದು ಹಾಗೂ ಆತಗೂರು ಗ್ರಾಮ ಪಂಚಾಯಿತಿಯ ಅಲ್ಲಂಶೆಟ್ಟಹಳ್ಳಿಯಲ್ಲಿ 1.20 ಎಕರೆ ಸರ್ಕಾರಿ ಜಾಗವಿದ್ದು ಉಳಿದ ಪಂಚಾಯಿತಿಗಳಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಿ ಅಥವಾ ಜಾಗ ಖರೀದಿ ಮಾಡಿ ನಿವೇಶನ ನೀಡಬೇಕೆಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ವ್ಯವಸ್ಥಾಪಕ ಮುನೇಂದ್ರಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ಅಂಬೂಜಿ, ಖಜಾಂಚಿ ಎಂ.ವಿಜೇಂದ್ರಕುಮಾರ್, ಉಪಾಧ್ಯಕ್ಷರಾದ ಕೆ.ಶಿವಲಿಂಗಯ್ಯ, ವೆಂಕಟೇಶ್, ಸಹ ಕಾರ್ಯದರ್ಶಿ ಜಯರಾಮಯ್ಯ, ಸಮಿತಿ ಸದಸ್ಯರಾದ ರೇಣುಕಮ್ಮ, ಕೆ.ಬೋರಯ್ಯ, ಟಿ.ಎಲ್.ಮಹೇಶ್ ಇದ್ದರು.