ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಜಾತ್ಯಾತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.
- ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಾಣ
- ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ
ಮಂಡ್ಯ: ಎಸ್‌ಐಆರ್ ವಿರೋಧಿಸಿ ಜಾತ್ಯಾತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ಎಂಬುದು ರಸಹ್ಯ ದಾಖಲೆಯಲ್ಲ. ಅದು ದೇಶದ ಮತದಾರರ ಮುಕ್ತ ಪಟ್ಟಿ. ಕರಡು ಪಟ್ಟಿ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ ಪಾರದರ್ಶಕತೆ ಇರುವ ರೀತಿಯಲ್ಲಿ ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ಆ ಒಳಪಡಿಸಿ ಮುಕ್ತವಾದ ರೀತಿಯಲ್ಲಿ ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿ ಮಾಡಬೇಕು. ಈ ಪ್ರಕ್ರಿಯೆಯನ್ನು ಗಡಿಬಿಡಿಯಲ್ಲಿ ನಡೆಸಬಾರದು ಕನಿಷ್ಟ 1 ವರ್ಷದ ಅವಧಿ ನಿಗದಿ ಮಾಡಬೇಕು. ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ ಕರಡು ಪಟ್ಟಿ ತಯಾರಿಸಲು, ಕರಡನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿ ತಯಾರಿಸಲು 6 ತಿಂಗಳು ಸಮಯ ಇರಬೇಕು ಎಂದು ಒತ್ತಾಯಿಸಿದರು.
ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಲೆಮಾರಿಗಳು, ಆದಿವಾಸಿಗಳು, ದಲಿತರು, ಬಡ ಅಲ್ಪಸಂಖ್ಯಾತರು ಮುಂತಾದ ದಾಖಲೆಗಳ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜನ ವರ್ಗಗಳು ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ವಂಚಿತರಾಗದಂತೆ ಒಳಗೊಳ್ಳಲು ಅವರಿಗಾಗಿ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು. ರಾಜ್ಯದ ಒಬ್ಬ ಅರ್ಹ ಮತದಾರರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಇದಕ್ಕಾಗಿ ರಾಜ್ಯ ಸರ್ಕಾರ ಸಹ ಕೆಲವು ವಿಶೇಷ ಕ್ರಮಗಳಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಚೆಕ್‌ಮೇಟ್ ಪಟ್ಟಿ ತಯಾರಿಸಬೇಕು. ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ ಪಕ್ಕಾ ಪಟ್ಟಿ ಸಿದ್ಧಪಡಿಸಬೇಕು. ಈ ಪಟ್ಟಿಯಲ್ಲಿ ಬರುವ ಪ್ರತಿಯೊಬ್ಬರ ಹಿತವನ್ನು ರಕ್ಷಿಸಿಕೊಳ್ಳಲು ರಾಜ್ಯ ಹೋರಾಟಬೇಕು. ಸ್ಮಾರ್ಟ್ ಕಾರ್ಡ್ ನೀಡಬೇಕು. ಮತದಾರರ ನೆರವು ಕೇಂದ್ರಗಳನ್ನು ತೆರೆಯಬೇಕು. ಈ ಕೇಂದ್ರಗಳ ಮೂಲಕ ಜನರು ಅಗತ್ಯವಿರುವ ಮೂಲ ದಾಖಲೆಗಳನ್ನು ಸತಾಯಿಸದೆ ತ್ವರಿತವಾಗಿ ಜನರಿಗೆ ನೀಡಬೇಕೆಂದು ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಬಿ.ಪಿ.ಪ್ರಕಾಶ್, ಎಲ್.ಸಂದೇಶ್, ಎ.ಎಲ್.ಕೆಂಪೂಗೌಡ, ಸಿ.ಕುಮಾರಿ, ಕೃಷ್ಣೇಗೌಡ, ಸಿದ್ದರಾಜು, ಟಿ.ಡಿ.ಬಸವರಾಜು, ಅಮ್ಜದ್ ಪಾಷ, ಚೀರನಹಳ್ಳಿ ಲಕ್ಷ್ಮಣ್, ನಿರಂಜನ್, ಕೃಷ್ಣ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಬಿ.ಟಿ.ವಿಶ್ವನಾಥ್, ಹುರುಗಲವಾಡಿ ರಾಮಯ್ಯ ಇತರರಿದ್ದರು.