ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಕಾರ್ಯಕರ್ತರು ಸಭೆ ನಡೆಸಿ ಚರ್ಚಿಸಿದರು.
ಕೆ.ಎಂ.ದೊಡ್ಡಿ: ಮದ್ದೂರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಮತ್ತು ಚಾಂಶುಗರ್ಸ್ ಕಾರ್ಖಾನಗೆಳ ರೈತ ವಿರೋಧಿ ನೀತಿ ಖಂಡಿಸಿ ಜೂ.15 ರಂದು ತಾಲೂಕು ರೈತ ಸಂಘ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಕಾರ್ಯಕರ್ತರು ಸಭೆ ನಡೆಸಿ ಚರ್ಚಿಸಿದರು. ಟನ್ ಕಬ್ಬಿಗೆ ಬಾಕಿ 50 ರೂ.ಗಳನ್ನು ನೀಡದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಸರ್ಕಾರ ಘೋಷಿಸಿರುವ
ಕಾರ್ಖಾನೆಯ ಪಾಲು ಟನ್‌ವೊಂದಕ್ಕೆ 50 ರೂ.ಗಳನ್ನು ರಾಜ್ಯದ ಕೆಲವು ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿಸಿವೆ. ಆದರೆ ಕೊಪ್ಪದ ಎನ್‌ಎಸ್‌ಎಲ್ ಹಾಗೂ ಕೆ.ಎಂ.ದೊಡ್ಡಿಯ ಚಾಂಶುಗರ್ಸ್ ಕಾರ್ಖಾನೆಗಳು 50 ರೂ. ಪಾವತಿ ಮಾಡದೇ ಅದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಖಂಡನೀಯ ಎಂದು ಹೇಳಿದರು.
ಕೂಡಲೇ ಕಾರ್ಖಾನೆಗಳು ತಡೆಯಾಜ್ಞೆ ವಾಪಸ್ ಪಡೆದು ರೈತರಿಗೆ 50 ರೂ. ಪ್ರೋತ್ಸಾಹಧನ ಪಾವತಿಸಬೇಕು. ನಂತರ ಕಾರ್ಖಾನೆಗಳಲ್ಲಿ ಕಬ್ಬು ಅರೆಯಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಜೂ.15 ರಂದು ಎರಡು ಕಾರ್ಖಾನೆಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ರೈತರು, ಕಬ್ಬು ಬೆಳೆಗ್ರಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಬಿಡದಿ ಟೌನ್ ಶೀಪ್ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಕೃಷಿ ಭೂಮಿಯನ್ನು ಪಡೆದು ಜತೆಗೆ ರೈತರನ್ನು ಒಕ್ಕಲೆಬ್ಬಿಸಿ ಅನ್ಯಾಯವೆಸಗಲು ಹೊರಟಿದೆ. ರೈತಪರ ಹೋರಾಟಗಳನ್ನು ಲೆಕ್ಕಸದೆ ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಬೋರಾಪುರ ಶಂಕರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪಾಜಿ, ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್, ವೃತ್ತ ಘಟಕದ ಅಧ್ಯಕ್ಷ ಸಿದ್ದರಾಜು ಕಳ್ಳಿಮೆಳೆದೊಡ್ಡಿ, ತಾಲೂಕು ಉಪಾಧ್ಯಕ್ಷ ಮುಟ್ಟನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಸಿ.ಎ.ಕೆರೆ ಮಹದೇವು, ಡಿ.ಎ.ಕೆರೆ ರಮೇಶ್, ಮಾದರಹಳ್ಳಿ ದೇಶಿಗೌಡ, ಗುರುದೇವರಹಳ್ಳಿ ಬೋರೇಗೌಡ, ಕೃಷ್ಣ ಅಣ್ಣೂರು, ಬನ್ನಹಳ್ಳಿ ರಮೇಶ, ನಾಗಲಿಂಗು ಮಾದರಹಳ್ಳಿ ಸೇರಿದಂತೆ 60 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.