ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟಿರುವುದು. 
ಮಂಡ್ಯ

ಒಳಮೀಸಲಾತಿ ಜಾರಿ ಖಂಡಿಸಿ ಪ್ರತಿಭಟನೆ

ರವಿಕುಮಾರ್ ಪಿ. ಕೆ
ಹಲಗೂರು: ಬಲಗೈ ಸಮುದಾಯಗಳ ಒಕ್ಕೂಟ ಹಲಗೂರು, ದಲಿತ ಸಂಘರ್ಷ ಸಮಿತಿ ಹಲಗೂರು ಘಟಕ, ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸದಸ್ಯರು ಒಳಮೀಸಲಾತಿ ಜಾರಿ ಖಂಡಿಸಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಹಲಗೂರು ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ನಾಡಕಚೇರಿಯವರೆಗೆ ಮೆರವಣಿಗೆಯಲ್ಲಿ ಹೊರಟ ನೂರಾರು ಪ್ರತಿಭಟನಾಕಾರರು ವಿಶ್ವವಿದ್ಯಾಲಯ ಮಟ್ಟದಲ್ಲಿ ಒಳಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುಗಳನ್ನು ಕೂಡಲೇ ಪರಿಷ್ಕರಿಸಬೇಕೆಂದು ಆಗ್ರಹಿಸಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆಯು ಪ್ರವರ್ಗ ಎ, ಬಿ, ಸಿ ಎಂದು ವಿಂಗಡಿಸಿದ್ದು, ಇದರಲ್ಲಿ ಬಿ ಮತ್ತು ಸಿ ವರ್ಗಕ್ಕೆ ತೀವ್ರ ಅನ್ಯಾಯ ಉಂಟಾಗಿದ್ದು ಕೂಡಲೇ ಸರಿಪಡಿಸಬೇಕು. ಗೊಂದಲಗಳನ್ನು ಪರಿಹರಿಸುವವರೆಗೂ ಸರ್ಕಾರ ಯಾವುದೇ ಬಗೆಯ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಬಾರದು. ಪ್ರಕ್ರಿಯೆ ಮುಂದುವರಿಸಿದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಲಗೈ ಸಮುದಾಯದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸರ್ಕಾರ ಪರಿಶಿಷ್ಟರಿಗೆ ಹೊಸ ಜಾತಿ ಪ್ರಮಾಣ ಪತ್ರವನ್ನು ವಿತರಿಸುವುದನ್ನು ನಿಲ್ಲಿಸುವುದು ಮತ್ತು ಹಳೆಯ ಜಾತಿ ಪ್ರಮಾಣ ಪತ್ರವನ್ನೇ ಮುಂದುವರಿಸಬೇಕು. ಈ ಗೊಂದಲಗಳಿಗೆ ಪರಿಹಾರ ಸಿಗುವ ತನಕ ಹಳೇ ಮೀಸಲಾತಿಯನ್ನು ಅನ್ವಯಿಸಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹಲಗೂರು ನಾಡಕಚೇರಿಯ ಉಪ ತಹಸೀಲ್ದಾರ್ ಕೆ.ನಟರಾಜು ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಡಿಎಸ್‌ಎಸ್ ಮುಖಂಡರಾದ ಮುದ್ದಯ್ಯ, ನಾಗ ಸಿದ್ದಯ್ಯ, ಟಿ.ಎಚ್.ಸ್ವಾಮಿ, ಕಟಕಯ್ಯ, ಕಾಳಯ್ಯ, ಸಿದ್ದರಾಮು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಶಿವಕುಮಾರ್, ಎಂ.ಎಲ್.ಗುರುಸಿದ್ದಪ್ಪಾಜಿ, ಸ್ವಾಮಿ, ಬಿ.ಡಿ.ರಾಜೇಂದ್ರ, ಡಿ.ಸಿ.ಬಸವರಾಜು, ಶಿವಣ್ಣ, ಮಹದೇವು, ಸಿದ್ದಯ್ಯ, ಸಂಪತ್ ಕುಮಾರ್, ಕೆ.ಬಿ.ಜಯಶಂಕರ್, ಪ್ರಮೋದ್, ಜಗದೀಶ್, ಬಸವರಾಜು, ದೇವಮ್ಮ, ಪುಟ್ಟ ಗೌರಮ್ಮ ಇದ್ದರು.