ವಿದ್ಯುತ್ ಖಾಸಗೀಕರಣ ವಿರೋಧಿಸಿ ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಕಚೇರಿ ಮುಂಭಾಗ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸಿದರು. ಪುಟ್ಟಸ್ವಾಮಿ, ಪ್ರದೀಪ್, ಶಂಕರ್, ಶಿವರಾಮು, ನಂದನ್ ಇತರರಿದ್ದರು.
ಕೆ.ಆರ್.ಪೇಟೆ: ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಗೆ ನೀಡದಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧದ ಕಚೇರಿ ಮುಂಭಾಗ ಅಧಿಕಾರಿಗಳು ಹಾಗೂ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಮುಂಭಾಗ ಎಇಇ ಪುಟ್ಟಸ್ವಾಮಿ ನೇತೃತ್ವದಲ್ಲಿ ನೌಕರರು ಜಮಾಯಿಸಿ ಮಿನಿವಿಧಾನಸೌಧದ ತನಕ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಿದರು.
ರೈತಸಂಘದ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ, ಸೆಸ್ಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಆತಂಕ ಮೂಡಿಸಿದೆ. ಖಾಸಗಿ ಕಂಪನಿಗೆ ಪರವಾನಗಿ ನೀಡಿದರೆ ಗ್ರಾಹಕರು, ರೈತರಿಗೆ ತುಂಬಾ ತೊಂದರೆಯಾಗಲಿದೆ. ಜತೆಗೆ ನೌಕರರ ಸೇವಾ ಭದ್ರತೆಗೂ ಧಕ್ಕೆ ಉಂಟಾಗಲಿದೆ ಎಂದರು.
ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದು ರೈತ ವಿರೋಧಿ ಹಾಗೂ ಜನ ವಿರೋಧಿಯಾಗಿದ್ದು, ಸರ್ಕಾರ ಕೂಡಲೇ ಈ ಚಿಂತನೆಯನ್ನು ಕೈ ಬಿಡಬೇಕು. ಸೆಸ್ಕ್ ನೌಕರರ ಒಕ್ಕೂಟ, ರೈತರು, ಗ್ರಾಹಕರು ಹಾಗೂ ಗುತ್ತಿಗೆದಾರರು ಎಲ್ಲರೂ ವಿರೋಧ ಮಾಡಬೇಕು. ಖಾಸಗೀಕರಣದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.
ಉದ್ಯೋಗ ಭದ್ರತೆಗೆ ಧಕ್ಕೆ: ವಿದ್ಯುತ್ ಕಂಪನಿ ಖಾಸಗೀಕರಣಗೊಂಡರೆ ಉದ್ಯೋಗ ಭದ್ರತೆ ಇಲ್ಲದಂತಾಗಿ ನೌಕರರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಖಾಸಗಿ ಕಂಪನಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ, ಕೆಲಸಕ್ಕೆ ತಕ್ಕಷ್ಟು ಮಾತ್ರ ಸಂಬಳ ನೀಡುವುದರಿಂದ ನೌಕರರು ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂದು ಹೇಳಿದರು.
ಎಇಇ ಪುಟ್ಟಸ್ವಾಮಿ ಮಾತನಾಡಿ, ಖಾಸಗೀಕರಣಗೊಳಿಸಿದರೆ ಮುಂದಿನ ದಿನಗಳಲ್ಲಿ ಕಂಪನಿಯು ನೌಕರರಿಗೆ ಕೆಲಸ ಕೊಡದೆ ಅನಿವಾರ್ಯವಾಗಿ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತಹ ಪರಿಸ್ಥಿತಿ ನಿಮಾರ್ಣ ಮಾಡಲಿದೆ. ಹಾಗಾಗಿ ನೌಕರರು, ನೌಕರ ಸಂಬಂಧಿತ ಸಂಘಗಳು, ಒಕ್ಕೂಟಗಳು ಜತೆಗೂಡಿ ಖಾಸಗೀಕರಣ ವಿರೋಧಿಸಿ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದರು.
ಸರ್ಕಾರದಿಂದ ಸಬ್ಸಿಡಿ ಬಂದರಷ್ಟೇ ಖಾಸಗಿ ಕಂಪೆನಿಗಳು ರೈತರಿಗೆ ವಿದ್ಯುತ್ ಸಂಪರ್ಕ ನೀಡುತ್ತವೆ. ಇಲ್ಲದಿದ್ದರೆ ಸಂಪರ್ಕವನ್ನೇ ಕಡಿತ ಮಾಡುತ್ತವೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ತುಂಬ ತೊಂದರೆಯಾಗಲಿದೆ. ಜತೆಗೆ ಅಧಿಕಾರಿಗಳು, ನೌಕರರ ಹುದ್ದೆಗಳಿಗೆ ಕತ್ತರಿ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಇಇ ಪ್ರದೀಪ್, ಶಂಕರ್, ಎಇ ಶಿವರಾಮು, ನಂದನ್, ಜೆಇ ಶುಭಾಂಕ್, ರಘು, ರವೀಂದ್ರ, ಸುನೀಲ್, ಶಿವಶಂಕರಮೂರ್ತಿ, ಜಗದೀಶ್, ಅಧಿಕಾರಿಗಳು, ಪವರ್‌ಮನ್‌ಗಳು ಇದ್ದರು.