ಗ್ಯಾಸ್ ಸಿಲಿಂಡರ್ ಅಭಾವ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹಿಸಿ ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಮಂಗಳವಾರ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಿದರು. ದೇವಿ, ಭರತ್ ರಾಜ್, ಲಿಂಗರಾಜಮೂರ್ತಿ, ಮಹದೇವು, ರಾಮಕೃಷ್ಣ, ಗುರುಸ್ವಾಮಿ, ಸುಶೀಲಾ, ಪ್ರೇಮಾ, ರತ್ನಮ್ಮ, ಚಿಕ್ಕಸ್ವಾಮಿ ಇದ್ದರು.  
ಮಂಡ್ಯ

ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ನಾಗೇಶ ಎಸ್
ಮಳವಳ್ಳಿ: ಸಿಲಿಂಡರ್ ಅಭಾವ ಮತ್ತು ಬೆಲೆ ಹೆಚ್ಚಳದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮುಖಂಡರು ಮಂಗಳವಾರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸೌದೆ ಒಲೆಯಲ್ಲಿ ಕಾಫಿ ಕಾಯಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಜಗತ್ತಿನಲ್ಲಿರುವ ತೈಲ ಉತ್ಪನ್ನಗಳನ್ನು ತನ್ನ ಹಿಡಿತಕ್ಕೆ ಇಟ್ಟುಕೊಳ್ಳಲು ಮತ್ತು ತಾನು ಉತ್ಪಾದಿಸುವ ಯುದ್ಧ ಸಾಮಗ್ರಿಗಳನ್ನ ಮಾರಾಟ ಮಾಡಲು ಜಗತ್ತಿನ ಹಲವಾರು ರಾಷ್ಟ್ರಗಳ ಮೇಲೆ ಯುದ್ಧ ನಡೆಯಲು ಕಾರಣಕರ್ತರಾಗಿರುವ ಅಮೆರಿಕ ಅಧ್ಯಕ್ಷರ ನೀತಿಯನ್ನು ಖಂಡಿಸಿದರು.
ಯುದ್ಧದಿಂದಾಗಿ ಇರಾನಿನ ಶಾಲಾ ಮಕ್ಕಳು ಬಲಿಯಾಗಿದ್ದಾರೆ. ಭಾರತದ ಆಮದು ಮತ್ತು ರಫ್ತುಗಳ ಮೇಲೆ ತೊಂದರೆ ಉಂಟಾಗಿದೆ. ಯುದ್ಧವೆಂದರೆ ಮನುಕುಲದ ಮೇಲೆ ಅಪಾರ ಪ್ರಮಾಣದ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಕೂಡಲೇ ಯುದ್ಧ ನಿಲ್ಲಿಸಬೇಕೆಂದು ಮನವಿ ಮಾಡಿದರು.
ಸಿಲಿಂಡರ್ ಬೆಲೆ ಹೆಚ್ಚಳ ಮಾಡುವುದು ಹಾಗೂ ಅಭಾವ ನಿಯಂತ್ರಿಸಲು ಕೂಡಲೇ ಭಾರತ ಸರ್ಕಾರ ಕ್ರಮ ವಹಿಸಬೇಕಿದೆ. ಭಾರತಕ್ಕಿಂತಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮುಂದಿನ 200 ದಿನಗಳಿಗಾಗುವಷ್ಟು ಅಡಿಗೆ ಅನಿಲ ಇತರ ತೈಲ ಉತ್ಪನ್ನಗಳನ್ನು ಸಂಗ್ರಹಿಸಿದೆ. ಆದರೆ ಭಾರತ ಮುಂದಾಲೋಚನೆ ಇಲ್ಲದೆ ಅಧಿಕಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಭರತ್ ರಾಜ್, ಅಧ್ಯಕ್ಷ ಮಹದೇವು, ಕಾರ್ಯದರ್ಶಿ ಗುರುಸ್ವಾಮಿ, ಸುಶೀಲಾ, ಪ್ರೇಮಾ, ರತ್ನಮ್ಮ, ವಿಷಕಂಠ, ನಂಜುಂಡಸ್ವಾಮಿ, ಜಿ.ರಾಮಕೃಷ್ಣ, ಚಿಕ್ಕಸ್ವಾಮಿ ಇದ್ದರು.