ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಮದ್ದೂರು ನಗರದ ಸೆಸ್ಕ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮುಖಂಡರಾದ ನ.ಲಿ.ಕೃಷ್ಣ, ಬಾಬು, ಅಜ್ಜಹಳ್ಳಿ ಚಂದ್ರ, ಮಾಲಾಗಾರನಹಳ್ಳಿ ರಾಜೇಶ್, ಮಲವರಾಜು, ಕಾಂತರಾಜು, ಸೋಂಪುರ ಚಂದ್ರಶೇಖರ್ ಇತರರು ಇದ್ದರು. 
ಮಂಡ್ಯ

ಮದ್ದೂರಿನ ಸೆಸ್ಕ್ ಕಚೇರಿಗೆ ಮುತ್ತಿಗೆ

ಎ. ಆರ್. ರಘುರಾಮ
ಮದ್ದೂರು: ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸೆಸ್ಕ್ ಕಚೇರಿ ಮುಂದೆ ಸೋಮವಾರ ಜಮಾಯಿಸಿದ ಮಾಲಗಾರನಹಳ್ಳಿ, ಅಜ್ಜಹಳ್ಳಿ, ನಗರಕೆರೆ ಸೇರಿದಂತೆ ಇನ್ನಿತರರ ಗ್ರಾಮದ ಮುಖಂಡರು ವಿದ್ಯುತ್ ಪೂರೈಕೆ ಮಾಡದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಿಂತಕ ನ.ಲಿ.ಕೃಷ್ಣ ಮಾತನಾಡಿ, ಬಿರುಬಿಸಿಲ ಬೇಗೆಗೆ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ರೈತರು ಹಾಗೂ ಬೊರ್‌ವೆಲ್ ಮಾಲೀಕರು ಒಂದು ವಾರದಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದಾರೆ. ಅದಕ್ಕಾಗಿ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವ ಸಮಯ ನಿಗದಿ ಪಡಿಸಿ ಅದರಂತೆ ಆಡಚಣೆ ಇಲ್ಲದಂತೆ ಗುಣಮಟ್ಟದ ವಿದ್ಯುತ್ ಕೊಡಬೇಕು. ವಿದ್ಯುತ್ ಸರಬರಾಜು ಸಮಯದಲ್ಲಿ ಬದಲಾವಣೆ ಆದಾಗ ರೈತರಿಗೆ ವ್ಯತ್ಯಯದ ಮಾಹಿತಿ ನೀಡಬೇಕು. ರಿಪೇರಿ ಹಾಗೂ ಲೊಡ್ ಶೆಡ್ಡಿಂಗ್ ಕಾರಣದಿಂದ ಕಡಿತಗೊಳಿಸುವ ವಿದ್ಯುತ್ ಅನ್ನು ನಿಗದಿ ಪಡಿಸಿದ ಸಮಯದಷ್ಟೂ ಕಾಲ ಸರಬರಾಜು ನೀಡಬೇಕು ಎಂದು ಆಗ್ರಹಿಸಿದರು.
ಕ್ಯಾತಘಟ್ಟ, ಅಜ್ಜಹಳ್ಳಿ ವಿದ್ಯುತ್ ಪೀಡರ್ ಕೆಲಸ ಶೀಘ್ರ ಮುಗಿಸಿ ವಿದ್ಯುತ್ ಸಮಯ ಹೆಚ್ಚಳಮಾಡಬೇಕು. ರೈತರು ಹಾಗೂ ಗ್ರಾಹಕರ ಜತೆ ಅಧಿಕಾರಿಗಳು, ನೌಕರರು ಸೌಜನ್ಯಯುತವಾಗಿ ವರ್ತಿಸಿ ಸರಿಯಾದ ಮಾಹಿತಿ ನೀಡಬೇಕು ಎಂದರು.
ವಿದ್ಯುತ್ ತಂತಿಗೆ ತಗುಲುವ ತೆಂಗಿನಗರಿ, ಮರದಕೊಂಬೆ ಹಾಗೂ ಬಳ್ಳಿಗಳನ್ನು ಸಕಾಲಿಕವಾಗಿ ತೆಗೆದು ಅನಗತ್ಯ ವಿದ್ಯುತ್ ಅವಘಡ ತಪ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ್, ಪ್ರತಿಭಟನಕಾರರ ಮನವಿ ಆಲಿಸಿದರು. ನಂತರ ಮಾತನಾಡಿ, ರಾಜ್ಯಮಟ್ಟದಲ್ಲಿ ವಿದ್ಯುತ್ ಪೂರೈಕೆ ಹಾಗೂ ವಿತರಣಾ ಕ್ರಮದಲ್ಲಿ ಉಂಟಾದ ವ್ಯತ್ಯಯದಿಂದ ಸ್ಥಳೀಯ ಸರಬರಾಜಿನಲ್ಲೂ
ಕಳೆದ ವಾರ ತೊಂದರೆಯಾಗಿದೆ. ಇದೀಗ ಈ ಕೊರತೆ ನೀಗಿಸಲು ಸುಧಾರಣೆ ಕ್ರಮಗಳು ರಾಜ್ಯಮಟ್ಟದಲ್ಲಿ ಆಗುತ್ತಿವೆ. ಶೀಘ್ರವಾಗಿ ಪರಿಸ್ಥಿತಿ ಸುಧಾರಣೆಗೆ ಬರಲಿದೆ. ನಂತರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಬಾಬು, ಅಜ್ಜಹಳ್ಳಿ ಚಂದ್ರ, ಮಾಲಾಗಾರನಹಳ್ಳಿ ರಾಜೇಶ್, ಮಲವರಾಜು, ಕಾಂತರಾಜು, ಸೋಂಪುರ ಚಂದ್ರಶೇಖರ್, ಮಹದೇವ್, ಪ್ರವೀಣ್, ಅಜ್ಜಹಳ್ಳಿ ರಾಜೇಶ್, ವಿನೋದ್, ಚಿಕ್ಕಣ್ಣ, ಕುಮಾರ್ ಸೇರಿದಂತೆ ಇತರರು ಇದ್ದರು.