ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತ ನಾಯಕ ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇಗೌಡ, ಜಗದೀಶ್, ಜಯರಾಮೇಗೌಡ, ಎಂ.ವಿ.ಕೃಷ್ಣ, ದರ್ಶನ್ ಇತರರಿದ್ದರು.  
ಮಂಡ್ಯ

ನಾಲೆಗಳಿಗೆ ನೀರು ಹರಿಸಿ ಬೆಳೆ ರಕ್ಷಿಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಭೂಮಿ ತಾಯಿ ಹೋರಾಟ ಸಮಿತಿ ಒತ್ತಾಯ
  • ರಸ್ತೆ ಸಂಚಾರ ತಡೆದು ಪ್ರತಿಭಟನೆ
ಶ್ರೀರಂಗಪಟ್ಟಣ: ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲು ತಕ್ಷಣ ಕಾವೇರಿ ಕಣಿವೆಯ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶುಕ್ರವಾರ ಜಮಾವಣೆಗೊಂಡ ಸಮಿತಿಯ ಕಾರ್ಯಕರ್ತರು ಹಸಿರು ಧ್ವಜಗಳ ಹಿಡಿದು ಹೆದ್ದಾರಿಗೆ ಅಡ್ಡ ನಿಂತು ರಾಜ್ಯ ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಮೈಸೂರು ಮಹಾರಾಜರು ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ ಉದ್ದೇಶಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಬೇಕು. ಬ್ರಿಟಿಷರ ದುರಾಡಳಿತದ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವುದು ಖಂಡನೀಯ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಹಾಗೂ ರೈತಾಪಿ ಜಾನುವಾರುಗಳಿಗೆ ನೀರೊದಗಿಸಲು ನಿರ್ಮಿಸಿದ ಅಣೆಕಟ್ಟನ್ನು ಇಂದು ತಮಿಳುನಾಡು ರಾಜ್ಯದ ನೀರಿನ ತೊಟ್ಟಿ ಮಾಡಿರುವುದಲ್ಲದೆ, ಬೆಂಗಳೂರು-ಮೈಸೂರು ಮಹಾನಗರಗಳ ಜನರ ಕುಡಿಯುವ ನೀರು ನೆಪ ಹೇಳಿ ರೈತರ ಬೆಳಗಳಿಗೆ ನೀರು ಕೊಡದೇ ಶೋಷಣೆ ಮಾಡುತ್ತಿರುವುದು ದಬ್ಬಾಳಿಕೆಗೆ ಸಾಕ್ಷಿ. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಮರೆತಿದ್ದಾರೆ ಎಂದು ಕಿಡಿಕಾರಿದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ಜಲಾಶಯದಲ್ಲಿ 87 ಅಡಿ ನೀರಿನ ಸಂಗ್ರಹ ಏರಿಕೆಯಾಗಿದ್ದು, ಒಳಹರಿವು ಸಹ 15 ಕ್ಯೂಸೆಕ್‌ಗೆ ಹೆಚ್ಚಿದೆ. ಈ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಒಂದು ವೇಳೆ ನೀರು ಕೊಡದಿದ್ದರೇ ರಾಜ್ಯ ಸರ್ಕಾರ ವಿರುದ್ಧ ನಿರಂತರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ಜಗದೀಶ್, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಂ.ವಿ.ಕೃಷ್ಣ, ದರ್ಶನ್ ಖಜಾಂಚಿ ಉಂಡುವಾಡಿ ಮಹದೇವು, ಬಲ್ಲೇನಹಳ್ಳಿ ಮಂಜುನಾಥ್, ಅಚ್ಚಪ್ಪನಕೊಪ್ಪಲು ರವಿಲಕ್ಷ್ಮಣ, ದೊಡ್ಡೇಗೌಡನಕೊಪ್ಪಲು ಮಹೇಶ್, ಕಡತನಾಳು ಚಾಮರಾಜು, ಕಪರನಕೊಪ್ಪಲು ಸುರೇಶ್, ಮಹೇಶ್, ಚಿಂದಗಿರಿಕೊಪ್ಪಲು ರಾಮಚಂದ್ರು, ಕೆಂಗಾರಕೊಪ್ಪಲು ರಾಮಕೃಷ್ಣ, ಪಾಲಹಳ್ಳಿ ರಾಮಚಂದ್ರು, ಹೆಬ್ಬಾಡಿಹುಂಡಿ ಸಿದ್ದೇಗೌಡ, ಮಹಾಲಿಂಗು, ಶಂಕರ್, ಕೆಂಪೇಗೌಡ ಇತರರು ಇದ್ದರು.