ಮದ್ದೂರು ನಗರದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆ ನಡೆಯಿತು. ಕೆ.ಎಂ.ಉದಯ್ ಹಾಗೂ ಅಧಿಕಾರಿಗಳು ಇದ್ದರು. 
ಮಂಡ್ಯ

ರಸ್ತೆ ವಿಸ್ತರಣೆ ಕಾಮಗಾರಿಗೆ ಪ್ರಸ್ತಾವನೆ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸಿಎಂ ನೇತೃತ್ವದ ಉನ್ನತಾಧಿಕಾರಿಗಳ ಸಭೆಯಲ್ಲಿ ಚರ್ಚೆ
ವಿಜಯವಾಣಿ ಸುದ್ದಿಜಾಲ ಮದ್ದೂರು
ನಗರದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಯಿತು.
2025-26ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ ಮದ್ದೂರು ನಗರದಲ್ಲಿ ರಸ್ತೆ ವಿಸ್ತೀರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಘೋಷಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ವಿಸ್ತೃತ ಯೋಜನಾ ವರದಿಯನ್ನೂ ತಯಾರಿಸಲಾಗಿತ್ತು. ಮದ್ದೂರು ನಗರದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆಯು ಜನನಿಬಿಡ ಹಾಗೂ ವಾಣಿಜ್ಯ ಚಟುವಟಿಕೆಯುಳ್ಳ ಮುಖ್ಯ ರಸ್ತೆಯಾಗಿದ್ದು ಸದ್ಯ ಪುರಸಭೆಯ ಸುಪರ್ದಿಯಲ್ಲಿರುತ್ತದೆ.
ಮದ್ದೂರು ನಗರ ದಿನೇ ದಿನೇ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಜನಸಂಖ್ಯೆ ಹಾಗೂ ವಹಿವಾಟಿನ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿ.ಬಿ.ಸರ್ಕಲ್‌ನಿಂದ ಕೊಲ್ಲಿ ಸರ್ಕಲ್‌ವರೆಗಿನ ಪೇಟೆ ಬೀದಿಯಲ್ಲಿ ಜನರು ಮತ್ತು ವಾಹನಗಳ ಭಾರಿ ಜಂಗುಳಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆ ಅಗತ್ಯವಾಗಿತ್ತು. ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಯಾದ ಈ ಯೋಜನೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಈ ವೇಳೆ ರಸ್ತೆ ವಿಸ್ತರಣೆ ಕಾಮಗಾರಿಯ ಯೋಜನಾ ವರದಿ ಪರಿಶೀಲಿಸಿ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಶಾಸಕ ಕೆ.ಎಂ.ಉದಯ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.