ತೊರೆ ಕಾಡನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವ ಚಿತ್ರ 
ಮಂಡ್ಯ

ಕನ್ನಡ ವರ್ಣಮಾಲೆ ಉಚ್ಚರಿಸಿದರೆ ಪ್ರಾಣಾಯಾಮ ಮಾಡಿದಂತೆ

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಲೋಲಾಕ್ಷಿ ಅಭಿಮತ
ಹಲಗೂರು: ಮುಂಜಾನೆ ಎದ್ದ ತಕ್ಷಣ ಕನ್ನಡ ವರ್ಣಮಾಲೆಯನ್ನು ಗಟ್ಟಿಯಾಗಿ ಉಚ್ಚಾರಣೆ ಮಾಡಿದರೆ ಯಾವ ಪ್ರಾಣಾಯಾಮ ಮಾಡುವ ಅಗತ್ಯವಿಲ್ಲ. ಈ ಮೂಲಕ ನುಡಿ ಉಳಿಸುವ ಜತೆಗೆ ದೇಹಕ್ಕೂ ಸಹಕಾರಿಯಾಗಲಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಲೋಲಾಕ್ಷಿ ಕರೆ ನೀಡಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಮತ್ತು ನೌಕರರ ಸ್ಥಳೀಯ ಸಮಿತಿ ತೊರೆಕಾಡನಹಳ್ಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನುಡಿ ಹಬ್ಬ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಮಹಾ ನಗರವನ್ನು ಪೊರೆಯಲು ಗ್ರಾಮೀಣ ಪ್ರದೇಶದ ತೊರೆಕಾಡನಹಳ್ಳಿ ಅಗತ್ಯವಾಗಿ ಬೇಕಿದೆ. ನೀರು ಕೇವಲ ಅಕ್ಷರವಲ್ಲ, ಅದೊಂದು ಜೀವಜಲ. ಪಂಚ ಭೂತಗಳಲ್ಲಿ ಅತ್ಯಂತ ಪ್ರಧಾನವಾಗಿರುವ ನೀರನ್ನು ನಾವೆಲ್ಲರೂ ಸೇರಿ ಸಂರಕ್ಷಣೆ ಮಾಡಬೇಕು. ಒಂದು ಹನಿ ನೀರಿಗೂ ಶ್ರಮಪಡುತ್ತಿರುವ ಜನರು ಇದ್ದಾರೆ. ಒಂದು ಹನಿ ಜಲ ಒಬ್ಬ ಮನುಷ್ಯನ ಪ್ರಾಣವನ್ನು ಕಾಪಾಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಬೆಂಗಳೂರು ಜಲ ಮಂಡಳಿ ಆಡಳಿತಾಧಿಕಾರಿ ಮದನ್ ಮೋಹನ್ ಮಾತನಾಡಿ ನೆಲ, ಜಲ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಒಂದಾಗಬೇಕಿದೆ. ನೌಕರರು ಒಂದು ಕುಟುಂಬದ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯೋಜನೆಯು ತ್ವರಿತಗತಿಯಲ್ಲಿ ಅಡಚಣೆ ಇಲ್ಲದೇ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಜಲ ಮಂಡಳಿಯ ಪರಿಶ್ರಮ ಇತರರಿಗೆ ಗೊತ್ತಾಗುವುದಿಲ್ಲ. ಅದನ್ನು ಮುಂದಿನ ಪೀಳಿಗೆಗೆ ಅರ್ಥೈಸುವಂತಾಗಬೇಕು ಎಂದರು.
ಮುಖ್ಯ ಲೆಕ್ಕಾಧಿಕಾರಿ ಜೆ.ಎಸ್.ಸುಬ್ಬರಾಮಯ್ಯ ಮಾತನಾಡಿ, ಅಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾವ್ ಸೇರಿದಂತೆ ಹಲವಾರು ಹೋರಾಟಗಾರರ ಪರಿಣಾಮ ಕರ್ನಾಟಕ ಏಕೀಕರಣಗೊಂಡಿತು. ಇಡೀ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವ ಜಿಲ್ಲೆ ಎಂದರೆ ಅದು ಮಂಡ್ಯ ಜಿಲ್ಲೆ ಮಾತ್ರ ಎಂದರೆ ತಪ್ಪಾಗಲಾರದು. ನಮ್ಮ ನಾಡಿಗೆ ಬರುವ ಪರಭಾಷೆಯವರ ಜತೆಗೆ ಮಾತಿಗೆ ಇಳಿದಾಗ ನಾವೆಲ್ಲರೂ ಕನ್ನಡ ಭಾಷೆಯಲ್ಲಿ ಉತ್ತರಿಸುವ ಕೆಲಸ ಆಗಬೇಕಿದೆ ಎಂದರು.
ಜಲಮಂಡಳಿ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅತಿಥಿ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ಮಂಡಳಿಯ ಅಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.