ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಆಯೋಜಿಸಲಾಗಿತ್ತು.
- ನಗರದಲ್ಲಿ ನಗರಾಭಿವೃದ್ಧಿ ಪ್ರಗತಿ ಪರಿಶೀಲನೆ
- ನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗೆ ಸೂಚನೆ
ಮಂಡ್ಯ: ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿ ಘಾಟ್ ಮತ್ತು ಸಂಗಮ ಸ್ಧಳಗಳಲ್ಲಿ ಅಸ್ಥಿ ವಿಸರ್ಜನೆ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಪುರೋಹಿತರಿಗೆ ನಿರ್ದಿಷ್ಟ ದರ ನಿಗದಿಪಡಿಸಬೇಕು. ಹಾಗೂ ಆ ಸ್ಧಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ಅಲ್ಲಿನ ಪುರೋಹಿತರ ಕರೆದು ಸಭೆ ಕರೆದು ವೈಜ್ಞಾನಿಕ ರೀತಿಯಲ್ಲಿ ಧಾರ್ಮಿಕ ವಿಧಿ ವಿಧಾನ ಕೈಗೊಳ್ಳುವಂತೆ ತಿಳಿಸಬೇಕೆಂದು ತಿಳಿಸಿದರು.
ಅವೈಜ್ಞಾನಿಕವಾಗಿ ಅಸ್ಥಿ ವಿಸರ್ಜನೆ ಮಾಡುವುದರಿಂದ ನದಿಗಳು ಕಲುಷಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ಪಾತ್ರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಆಚರಣೆ ಹಾಗೂ ಅಸ್ಥಿ ವಿಸರ್ಜನೆ ಮಾಡುವಾಗ ನೈರ್ಮಲ್ಯ ಕಾಪಾಡುವ ಕ್ರಮಗಳನ್ನು ಕೈ ಗೊಳ್ಳಬೇಕು. ಅಸ್ಥಿ ವಿಸರ್ಜನೆ ಜತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.
ನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನದಿ ಪಾತ್ರವು ಮಲಿನ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಪ್ರತ್ಯೇಕವಾದ ಮಾರ್ಗಸೂಚಿ ಸಿದ್ಥಪಡಿಸಿ. ಈ ಮೂಲಕ ನದಿ ಪಾತ್ರವು ಮಲೀನವಾಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಥಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಾಶ್ರೀ, ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್ ಇತರರಿದ್ದರು.