ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುಳಾ ಉದ್ಘಾಟಿಸಿದರು.
- ನಗರದಲ್ಲಿ ಹೊಸ ಕವಿತೆಗಳ ರಚನೆ ಕಾರ್ಯಕ್ರಮ
- ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಆಯೋಜನೆ
ಮಂಡ್ಯ: ಸಸಿ ನೆಟ್ಟು ಪೋಷಿಸುವುದು ಹಾಗೂ ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುಳಾ ತಿಳಿಸಿದರು.
ನಗರದ ಹೊಳಲು ರಸ್ತೆಯಲ್ಲಿರುವ ಇಂದಿರಾ ಗಾಂಧಿ ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಆಯೋಜಿಸಿದ್ದ ವಿದ್ಯಾರ್ಥಿನಿಯರಿಂದ ಹೊಸ ಕವಿತೆಗಳ ರಚನೆ-ವಾಚನ,ನಿಸರ್ಗದತ್ತ ಕಾವ್ಯ ಧ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನುಮದಿನದ ಸಂದರ್ಭದಲ್ಲಿ ಉಡುಗೊರೆ ಕೊಡುವ ಬದಲು ಗಿಡ ನೆಡುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಂಡರೆ ಅದೇ ನಾವು ಪ್ರಕೃತಿಗೆ ಕೊಡುವ ದೊಡ್ಡ ಕೊಡುಗೆ. ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ನೀರನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಭವಿಷ್ಯದಲ್ಲಿ ಮಂಡ್ಯ ಜಿಲ್ಲೆಯನ್ನು ಹಸಿರುಕರಣಗೊಳಿಸಬೇಕು. ಜಾಗತಿಕ ತಾಪಮಾನ ತಡೆಗಟ್ಟುವ ವಿಧಾನದಲ್ಲಿ ಬಹು ಮುಖ್ಯ ಪಾತ್ರ ವಹಿಸುವ ದೃಷ್ಟಿಯಿಂದ ವಿಶ್ವ ಜಲ ದಿನ ಹಾಗೂ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಯುವ ಮನಸ್ಸುಗಳಲ್ಲಿ ಜಾಗೃತಿ ಉಂಟುಮಾಡಲು ನಿಸರ್ಗದತ್ತ ಕಾವ್ಯ ಧ್ಯಾನ ಉಂಟು ಮಾಡುವ ಆಶಯದೊಂದಿಗೆ ಹೊಸ ಕವಿತೆಗಳ ರಚನೆ-ವಾಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯದಲ್ಲಿಯೇ ಮಂಡ್ಯ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತಾಪಿ ವರ್ಗದ ಜನರು ಕಬ್ಬು ಭತ್ತ ಬೆಳೆಯುವುದನ್ನು ಬಿಟ್ಟರೆ ಅರಣ್ಯೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಗಿಡ-ಮರಗಳು ಪರಿಸರ ಸಮತೋಲನ, ಶುದ್ಧ ಗಾಳಿ ಹಾಗೂ ಜೀವ ಜಲದ ಉಳಿವಿಗೆ ಅತ್ಯಗತ್ಯವಾಗಿದೆ. ಆದ್ದರಿಂದ ಅರಣ್ಯ ಸಂರಕ್ಷಣೆಗಾಗಿ ಪ್ರತಿಯೊಬ್ಬ ನಾಗರಿಕರೂ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಕವಿ ಕೆ.ಪಿ.ಮೃತ್ಯುಂಜಯ ಮಾತನಾಡಿ, ಕಾವ್ಯಕ್ಕೆ ಜಗತ್ತನ್ನು ರಕ್ಷಿಸುವ ಶಕ್ತಿ ಇದೆ. ಒಂದು ಹೆಣ್ಣು ಅಂತರಂಗದಲ್ಲಿ ಕವಿತ್ವವನ್ನು ಹೊಂದಿರುತ್ತಾರೆ. ಏಕೆಂದರೆ ಸುಖ-ದುಃಖ ಭಾವನೆಗಳಿಗೆ ಬರವಣಿಗೆ ರೂಪ ನೀಡುವವರು ಅವರೇ ಆಗಿದ್ದಾರೆ. ಪ್ರಸ್ತುತದಲ್ಲಿ ಯುದ್ಧ ನಡೆಯುತ್ತಿದೆ. ಅದು ಹೆಣ್ಣು ಮಕ್ಕಳ ಅಡುಗೆ ಮನೆ ಕೋಣೆಗೂ ಬಂದು ನಿಂತಿದೆ. ಅಡುಗೆ ಅನಿಲ ಇಲ್ಲವಾದರೆ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಮಾಯವಾಗುವ ಸನ್ನಿವೇಶ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಉಪನ್ಯಾಸಕಿಯರಾದ ಅನಿತಾ ಮಂಗಲ, ಆಶಾ ಹನಿಯಂಬಾಡಿ, ಸಂತೆಕಸಲಗೆರೆ ಬಸವರಾಜು, ಶೇಖರ್, ರಾಜೇಗೌಡ ಇತರರಿದ್ದರು.