ನಾಗಮಂಗಲ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಮರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಾಗಮಂಗಲ: ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಬಳಿಕ ಪಟ್ಟಣದ ಭಿಕ್ಷುಕರಿಗೆ ಹಣ್ಣು, ಹಂಪಲು ಮತ್ತು ನಗದು ದಾನ ಮಾಡಿದರು. ಬೆಳಗಿನಿಂದಲೇ ಹಬ್ಬದ ಸಡಗರದಲ್ಲಿದ್ದ ಮಕ್ಕಳು, ಯುವಕರು ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದ ಜಾಮಿಯಾ ಮಸೀದಿ, ಮಕ್ಕಾ ಮಸೀದಿ, ಮದೀನಾ ಮಸೀದಿ, ಯಾ ಅಲ್ಲಾ ಮಸೀದಿ, ಅನೀಫ್ ಮಸೀದಿ, ನೂರಾನಿ ಮಸೀದಿ, ಖುಭಾ ಮಸೀದಿ, ಉಮ್ಮರ್‌ಫಾರೂಕ್ ಮಸೀದಿ ಮತ್ತು ಅಕ್ಷ ಮಸೀದಿಗಳ ಪದಾಧಿಕಾರಿಗಳು ಸೇರಿದಂತೆ ಸಮುದಾಯದ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಸಾಮೂಹಿಕ ಪ್ರಾರ್ಥನೆ ನಡೆಯುವ ಸ್ಥಳ ಮತ್ತು ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.