ದಿವ್ಯ ಜ್ಯೋತಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿರುವುದು.
ಹಲಗೂರು: ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ದಿವ್ಯಜೋತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಹಬ್ಬದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಶಾಲಾ ವತಿಯಿಂದ ಬುಧವಾರ ಏರ್ಪಡಿಸಲಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ದಿವ್ಯಜೋತಿ ಶಾಲೆಯ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಶಾಲೆಯ ಮೈದಾನದಲ್ಲಿ ನಿರ್ಮಿಸಿದ್ದ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದ ಧಾನ್ಯಗಳ ರಾಶಿ, ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಕಬ್ಬು, ಎಳ್ಳು-ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆಯ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು. ವಿದ್ಯಾರ್ಥಿ ಗಳಿಗೆ ಪ್ರಿನ್ಸಿಪಲ್ ಹಾಗೂ ಫಾದರ್ ಎಮ್ಯಾನ್ಯುಯಲ್ ಜೇಕಬ್ ಹಬ್ಬದ ಶುಭಾಶಯಗಳನ್ನು ತಿಳಿಸಿ ಮಾತನಾಡಿ, ಮಕರ ಸಂಕ್ರಾಂತಿ ನಮಗೆ ಜೀವನದಲ್ಲಿ ಹೊಸ ಬೆಳಕು, ಆರೋಗ್ಯ ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಅದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಆದ್ದರಿಂದ ಪ್ರತಿವರ್ಷ ಜನವರಿಯಲ್ಲಿ ಈ ಹಬ್ಬವನ್ನು ಸುಗ್ಗಿ ಹಬ್ಬ ಎಂಬ ಹೆಸರಿನಿಂದ ಆಚರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು..