ಮದ್ದೂರು ತಾಲೂಕಿನ ತೈಲೂರು ಕೆರೆ ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀ ಯ ಹೆದ್ದಾರಿಯ ಸರ್ವಿಸ್ ರಸ್ತೆಯ ಖಾಸಗಿ ಬಸ್ ಪಲ್ಟಿಯಾಗಿರುವುದು. 
ಮಂಡ್ಯ

ಖಾಸಗಿ ಬಸ್ ಅಪಘಾತ, ಮೂವರಿಗೆ ಗಂಭೀರ ಗಾಯ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ತೈಲೂರು ಕೆರೆ ಸಮೀಪ ಅಪಘಾತ
  • ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ಮದ್ದೂರು: ತಾಲೂಕಿನ ತೈಲೂರು ಕೆರೆ ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಖಾಸಗಿ ಬಸ್ ತೆರಳುವಾಗ ರಸ್ತೆ ಬದಿ ಇದ್ದ ಸಿಮೆಂಟ್ ಬ್ಲಾಕ್‌ಗೆ ಡಿಕ್ಕಿ ಹೊಡೆದು ಹಿಂಬದಿ ಆಕ್ಸಲ್ ಕಟ್ಟಾಗಿ ಪಲ್ಟಿ ಹೊಡೆದಿದೆ. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದ್ದು, 27 ಜನರಿಗೆ ಸಣ್ಣಪುಟ್ಟ ಗಾಯಳಾಗಿವೆ.
ಘಟನೆಯಲ್ಲಿ ಭಾರತಿ, ದೇವಿಕಾ, ದಿಕ್ಷೀತ್, ಕೌಸಲ್ಯಾ, ರೇಣುಕಾ, ಸನತ್‌ಕುಮಾರ್, ಮಹದೇವಮ್ಮ, ಭಾರ್ಗವಿ, ಬಸವಣ್ಣ, ಜಯಲಕ್ಷ್ಮಮ್ಮ, ಚಂದ್ರಶೇಖರ, ಮಹದೇಶ, ಮಹದೇವಾ, ಗಂಗಯ್ಯ, ಉಮೇಶ ಗಾಯಾಳುಗಳಾಗಿದ್ದು, ಇವರೆಲ್ಲ ಬೆಂಗಳೂರಿನವರು ಎಂದು ತಿಳಿದು ಬಂದಿದೆ.
ಘಟನೆ ವಿವರ: ಮಳವಳ್ಳಿಯ ಶ್ರೀ ಕ್ಷೇತ್ರ ಶಿಂಷಾ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಮುಗಿಸಿ ಬೆಂಗಳೂರಿಗೆ ಮರಳುವಾಗ ಮಾರ್ಗ ಮಧ್ಯೆ ಭಾನುವಾರ ಮಧ್ಯಾಹ್ನ ಸುಮಾರು 4.30ಕ್ಕೆ ಅಪಘಾತ ಸಂಭವಿಸಿದೆ.
ವಾಹನ ಪಲ್ಟಿಯಾದ ತಕ್ಷಣವೇ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು, ಸ್ಥಳೀಯರು ಹಾಗೂ ವಿಷಯದ ತಿಳಿದು ಸ್ಥಳಕ್ಕೆ ಆಗಮಿಸಿ ನಗರದ ಸಂಚಾರ ಪೊಲೀಸರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆದಿದ್ದಾರೆ. ಬಳಿಕ ನಗರದ ಗುರುಶಾಂತಪ್ಪ ಸಾರ್ವಜನಿಕರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.
ಅಪಘಾತದಿಂದ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸಂಚಾರ ಪೊಲೀಸರು ಪಲ್ಟಿಯಾಗಿದ್ದ ಬಸ್ ಅನ್ನು ಮತ್ತೊಂದು ವಾಹನದ ಸಹಾಯದಿಂದ ಹೆದ್ದಾರಿಯಿಂದ ಪಕ್ಕಕೆ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಾಹನ ತಪಾಸಣೆ ಅವಶ್ಯ: ಯಾವುದೇ ವಾಹನಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಬೇಕು. ಒಂದು ವೇಳೆ ವಾಹನದಲ್ಲಿ ಸಮಸ್ಯೆಗಳು ಇದ್ದಾಗ ಇಂತಹ ಘಟನೆಗಳು ನಡೆಯುತ್ತದೆ. ಇದು ನಡೆದ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ. ಆದ್ದರಿಂದ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.