ಮಳವಳ್ಳಿಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ರಾಜ್ಯ ಸಮಿತಿ ಕೌನ್ಸಿಲ್ ಸಭೆ ಉದ್ಘಾಟಿಸಲಾಯಿತು. ಎಲ್‌ಐಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಎಲ್.ಮಂಜುನಾಥ್, ಎಚ್.ಸಿ.ಮಹೇಶ್, ಶಿವಮೂರ್ತಿ, ಜಯರಾಮು, ಶ್ರೀನಿವಾಸ್, ಪ್ರದೀಪ್, ಕುಮಾರ್, ಸಿದ್ದಲಿಂಗ ಒಡೆಯರ್, ಗುರುಪಾದಸ್ವಾಮಿ ಇದ್ದರು.
- ಜೀವವಿಮಾ ಪ್ರತಿನಿಧಿಗಳ ಸಂಘಟನೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್ ಭರವಸೆ
- ಎಲ್‌ಐಸಿ ರಾಜ್ಯ ಸಮಿತಿ ಕೌನ್ಸಿಲ್ ಸಭೆ
ಮಳವಳ್ಳಿ: ದೇಶದಲ್ಲಿ ಏಳು ದಶಕಗಳಿಂದ ಪಾಲಿಸಿದಾರರ ಬದುಕಿಗೆ ಭದ್ರತೆ ಒದಗಿಸುವ ಮೂಲಕ ಆರ್ಥಿಕ ವಹಿವಾಟಿನಲ್ಲಿ ಎಲ್‌ಐಸಿ ನಂಬಿಕೆ ಗಳಿಸಿಕೊಂಡಿದೆ ಎಂದು ಜೀವವಿಮಾ ಪ್ರತಿನಿಧಿಗಳ ಸಂಘಟನೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಎಲ್. ಮಂಜುನಾಥ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಲಾಗಿರುವ ಎರಡು ದಿನಗಳ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ರಾಜ್ಯ ಸಮಿತಿ ಕೌನ್ಸಿಲ್ ಸಭೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಶೇ.29 ರಷ್ಟು ಆರ್ಥಿಕ ವಹಿವಾಟಿಗೆ ಹೂಡಿಕೆ ಮಾಡುವ ಮೂಲಕ ಎಲ್ ಐಸಿ ನಾಗರಿಕರ ವ್ಯವಹಾರಿಕ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಯಾವುದೇ ಹಂತದಲ್ಲೂ ಮಾರುಕಟ್ಟೆ ಏರುಪೇರಿನಿಂದ ಆಗುವ ನಷ್ಟಗಳನ್ನು ತಾನೇ ಭರಿಸಿಕೊಂಡು ಗ್ರಾಹಕರಿಗೆ ಭರವಸೆ ನೀಡಿದ ಮೊತ್ತವನ್ನು ಪಾವತಿ ಮಾಡುತ್ತಿದೆ ಎಂದರು. ಪ್ರತಿನಿಧಿಗಳು ಸಂಘಟಿತರಾಗಿ ಮತ್ತಷ್ಟು ಸೇವೆಯನ್ನು ನೀಡುವಂತಗಾಗಬೇಕು ಎಂದವರು ಸಲಹೆ ನೀಡಿದರು.
ಎಲ್‌ಐಸಿ ದಕ್ಷಿಣ ಮಧ್ಯ ವಲಯ ಅಧ್ಯಕ್ಷ ಬಿ.ಜಯರಾಮು ಮಾತನಾಡಿ, ಸ್ಪಷ್ಟತೆ, ಸಾಮರ್ಥ್ಯ, ಆತ್ಮವಿಶ್ವಾಸ, ಧೈರ್ಯ, ನಿಖರವಾದ ನಿರ್ದಿಷ್ಟತೆ ಎಂಬ 5 ಗುರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿನಿಧಿಗಳು ಗುಣಮಟ್ಟದ ಸೇವೆಯನ್ನು ನೀಡುವಂತಗಾಗಬೇಕು ಎಂದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ದುಡಿಯುವ ಜನರು ಸಂಘಟಿತರಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಲ್‌ಐಸಿ ತಾಲೂಕು ಶಾಖೆ ಅಧ್ಯಕ್ಷ ಎಚ್.ಸಿ.ಮಹೇಶ್ ಮಾತನಾಡಿ, ಪ್ರತಿನಿಧಿಗಳಿಗೆ ಆಗುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಎರಡು ದಿನಗಳ ಕಾರ್ಯಾಗಾರದಲ್ಲಿ ಹಲವು ವಿಧದ ಚರ್ಚೆಗಳು ನಡೆಯಲಿವೆ. ಪ್ರತಿನಿಧಿಗಳ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದರು. ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ಡಿ.ಸಿ.ಶಿವಮೂರ್ತಿ, ಕಾರ್ಯಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಪ್ರದೀಪ್ , ಮೈಸೂರು ವಿಭಾಗೀಯ ಅಧ್ಯಕ್ಷ ಟಿ.ಎಸ್.ಸಿದ್ದಲಿಂಗ ಒಡೆಯರ್, ಗೌರವಾಧ್ಯಕ್ಷ ಬಿ.ಸಿ.ಗುರುಪಾದಸ್ವಾಮಿ ಇತರರು ಇದ್ದರು.