- ರೈತ ಸಂಘಟನೆ ಮತ್ತು ಸರ್ವೋದಯ ಕರ್ನಾಟಕ ಪಕ್ಷ
- ಬೂತ್ ಮಟ್ಟದಲ್ಲಿ ಬಲಪಡಿಸುವ ಮೂಲಕ ರಚನಾತ್ಮಕ ಹೋರಾಟ
- ಚುನಾವಣೆ ಎದುರಿಸಲು ತಯಾರಿ
ಪಾಂಡವಪುರ: ರೈತ ಸಂಘಟನೆ ಮತ್ತು ಸರ್ವೋದಯ ಕರ್ನಾಟಕ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸುವ ಮೂಲಕ ರಚನಾತ್ಮಕ ಹೋರಾಟದೊಂದಿಗೆ ಚುನಾವಣೆ ಎದುರಿಸಲು ತಯಾರಿ ಮಾಡಿಕೊಳ್ಳಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ರೈತ ಸಂಘಟನೆಯನ್ನು ಬಲಪಡಿಸಲಾಗುವುದು. ರೈತರ ಜೀವನ ಮಟ್ಟ ಸುಧಾರಣೆ, ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಆರ್ಥಿಕ ಸ್ಥಿತಿ ಉತ್ತಮಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲಿದೆ. ಸದ್ಯ ಸಹಕಾರ ಸಂಘಗಳು ಬೆಳೆ ಸಾಲ, ಪಡಿತರ ಮತ್ತು ಗೊಬ್ಬರ ಮಾರಾಟಕ್ಕೆ ಸೀಮಿತವಾಗಿದ್ದು, ರೈತರ ಬೆಳೆಗಳನ್ನು ಸೊಸೈಟಿಗಳ ಮುಖಾಂತರವೇ ಖರೀದಿಸಲು ಯೋಜನೆ ತಯಾರಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಪಾಲಾಗುತ್ತಿದ್ದ ಲಾಭ ರೈತರಿಗೆ ಉಳಿಯುತ್ತದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಏ.2ರಂದು ಕಾರ್ಯಾಗಾರ: ಸಹಕಾರ ಸಂಘಗಳ ಕಾರ್ಯವೈಖರಿಗೆ ಬದಲಾವಣೆ ತರಬೇಕಿದ್ದು, ಇದಕ್ಕಾಗಿ ಕ್ಷೇತ್ರದ ಎಲ್ಲ ಸಹಕಾರ ಸಂಘಗಳ ಸಿಇಒಗಳಿಗೆ ಏ.2ರಂದು ಕಾರ್ಯಾಗಾರ ಆಯೋಜಿಸಲಾಗಿದೆ. ರೈತರು ಬೆಳೆಯುವ ಬೆಳೆಗಳ ಖರೀದಿ ಮತ್ತು ಯಾವ ರೀತಿ ಗ್ರಾಹಕರಿಕೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು. ಸೊಸೈಟಿಗಳ ಸಿಇಒಗಳು ಪಕ್ಷಾತೀತವಾಗಿ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಬೆಳೆ ಖರೀದಿ ಮತ್ತು ಅದರಿಂದ ಉಪ ಉತ್ಪನ್ನ ತಯಾರಿಸಿ ಮಾರಾಟ ಮಾಡಲು ಅಗತ್ಯವಾಗಿ ಬೇಕಾಗಿರುವ ಬಂಡವಾಳವನ್ನು ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕ್‌ಗಳಲ್ಲಿ ಸಾಲದ ರೂಪದಲ್ಲಿ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸೊಸೈಟಿ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದರು.
ಧನ್ಯವಾದ : ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸರ್ಕಾರ ಸಾವಯವ ತಾಲೂಕು ಎಂದು ಘೋಷಿಸಿರುವುದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕು. ಪ್ರಾರಂಭದಲ್ಲಿ ಕಷ್ಟ ಎನ್ನಿಸಿದರೂ ಕ್ರಮೇಣ ಇದಕ್ಕೆ ಹೊಂದಿಕೊಳ್ಳಬಹುದು. ಬೆಳೆಗಳಿಗೆ ಸೂಕ್ತ ಬೆಲೆ ಮತ್ತು ಜಮೀನು ಇಲ್ಲದವರಿಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಉದ್ದೇಶ. ಇದಕ್ಕೆ ಎಲ್ಲರೂ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.