ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಪಂ ವತಿಯಿಂದ ನಿರ್ಮಾಣ ಮಾಡಿರುವ ಜಿಮ್ ಮತ್ತು ಉದ್ಯಾನವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಕದಲೂರು ರಾಮಕೃಷ್ಣ, ತಿಮ್ಮೇಗೌಡ, ಕೆ.ಎಂ.ರವಿ, ಶಿವಣ್ಣ, ಜಗದೀಶ್ ಸೇರಿದಂತೆ ಇತರರಿದ್ದರು. 
ಮಂಡ್ಯ

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆದ್ಯತೆ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ
  • ಮಕ್ಕಳ ಗ್ರಾಮ ಸಭೆ, ಜಿಮ್ ಉದ್ಘಾಟನೆ
ಮದ್ದೂರು: ನಗರ ಪ್ರದೇಶಗಳಲ್ಲಿ ಸಿಗುವ ಸವಲತ್ತುಗಳು ಗ್ರಾಮಾಂತರ ಪ್ರದೇಶದ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿ ಗುರುವಾರ ಗ್ರಾಪಂ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆ, ಜಿಮ್ ಉದ್ಘಾಟನೆ, ಅಂಗನವಾಡಿಗಳಿಗೆ ವಿವಿಧ ರೀತಿಯ ಆಟಿಕೆ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಜಿಮ್ ಮತ್ತು ಉದ್ಯಾನಗಳು ಈ ಹಿಂದೆ ನಗರ ಪ್ರದೇಶ ಜನರಿಗೆ ಮಾತ್ರ ಸೀಮಿತವಾಗಿತ್ತು, ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಜಿಮ್ ಮತ್ತು ಉದ್ಯಾನಗಳನ್ನು ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಲಾಗಿದೆ ಎಂದರು.
ಪ್ರಾಯೋಗಿಕವಾಗಿ ಕದಲೂರು ಗ್ರಾಮದಲ್ಲಿ ಜಿಮ್ ಹಾಗೂ ಉದ್ಯಾನ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲೂ ಜಿಮ್, ಉದ್ಯಾನ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಗುರು, ಹಿರಿಯರಿಗೆ ಗೌವರ ಕೊಡುವ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪಾಲಕರಿಗೆ, ಗುರುಗಳಿಗೆ ಹಾಗೂ ಸಮಾಜಕ್ಕೆ ಗೌರವ ತಂದು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಣದ ಪಡೆದ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ತೆರಳಿ ಕೃಷಿಯಿಂದ ವಿಮುಖವಾಗುತ್ತಿರುವುದು ಬೇಸರದ ವಿಷಯವಾಗಿದ್ದು, ಯುವಕರು ಗ್ರಾಮದಲ್ಲೆ ಉಳಿದುಕೊಂಡು ಬೇಸಾಯ ಮತ್ತು ಸ್ವ ಉದ್ಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ನನ್ನ ಸ್ವಗ್ರಾಮವಾದ ಕದಲೂರು ಗ್ರಾಮವನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡುತ್ತಿದ್ದು, ಇದಕ್ಕೆ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಗತ್ಯ ಸಹಕಾರ ನೀಡುತ್ತಿರುವುದು ಮೆಚ್ಚುಗೆ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಬಾಲ್ಯವಿವಾಹ ಅನಿಷ್ಟ ಪದ್ಧತಿಯಾಗಿದ್ದು, ಇದರಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಬಾಲ್ಯವಿವಾಹ ಪದ್ಧತಿಯನ್ನು ಪ್ರತಿಯೊಬ್ಬರೂ ವಿರೋಧಿಸಿ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಸದಸ್ಯರಾದ ಶಿವಣ್ಣ, ಸುನಿಲ್, ಅರುಣ್‌ಕುಮಾರ್, ಲೋಕೇಶ್, ತಿಮ್ಮೇಗೌಡ, ನಾರಾಯಣ್, ಬೋರಮ್ಮ, ಪಾಪಣ್ಣ, ಸರೋಜಮ್ಮ, ಪಿಡಿಒ ಜಗದೀಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ಶ್ವೇತಾ ಶಶಿಗೌಡ, ಕಾರ್ಯದರ್ಶಿ ಜ್ಯೋತಿ ಗಿರೀಶ್, ಮಾಜಿ ಅಧ್ಯಕ್ಷೆ ರೇಖಾರಾಜು ಇತರರಿದ್ದರು.