ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಟಿಎಪಿಸಿಎಂಎಸ್ ನಿರ್ದೇಶಕಿ ಅಮೂಲ್ಯಾ ಜಗದೀಶ್, ಯುವ ಮುಖಂಡ ಜಗದೀಶ್ ಮತ್ತಿತರರನ್ನು ಶಾಸಕ ಕೆ.ಎಂ.ಉದಯ್ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಚಲುವರಾಜು, ರಾಜೀವ್, ಪಿ.ಸಂದರ್ಶ, ಹರೀಶ್‌ಬಾಬು, ಕೃಷ್ಟಪ್ಪ ಇದ್ದರು. 
ಮಂಡ್ಯ

ಮಳೆ ನೀರು ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ

ಲಲಾಟಾಕ್ಷ ಎಸ್
ಮದ್ದೂರು: ನಗರದ 23 ವಾರ್ಡ್‌ಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಕಾಮಗಾರಿಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಬಡಾವಣೆ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ರಸ್ತೆ ಮತ್ತು ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು. ಮದ್ದೂರು ನಗರದ ಅಭಿವೃದ್ಧಿ ಕುರಿತಾಗಿ ಈಗಾಗಲೇ ನೀಲಿ ನಕ್ಷೆ ಸಿದ್ಧಗೊಂಡಿದ್ದು ನಗರ ವ್ಯಾಪ್ತಿಯ ಪ್ರಮುಖ ಮೂರು ನಾಲೆಗಳ ಪುನಶ್ಚೇತನ ಸೇರಿದಂತೆ ಗೊರವನಹಳ್ಳಿ ಸಂಪರ್ಕ ರಸ್ತೆ, ಕೊಪ್ಪ ವೃತ್ತ, ಮದ್ದೂರಮ್ಮ ಬಡಾವಣೆ ಹಾಗೂ ಇತರೆಡೆ ಕಾಮಗಾರಿ ಚಾಲ್ತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಮದ್ದೂರು ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳ ಮರು ಡಾಂಬರೀಕರಣ, ಮಳೆ ನೀರು ಚರಂಡಿಗಳ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ
ಜಾತ್ಯತೀತ ಜನತಾದಳದ ಯುವ ಮುಖಂಡ ಜಗದೀಶ್, ಪತ್ನಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕಿ ಅಮೂಲ್ಯಾ ಜಗದೀಶ್ ಒಳಗೊಂಡಂತೆ ಯುವಕರ ತಂಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಕೆ.ಎಂ.ಉದಯ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರು ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ನಗರಸಭೆ ಮಾಜಿ ಸದಸ್ಯರಾದ ಕೃಷ್ಣಪ್ಪ, ಎಂ.ಬಿ.ಸಚಿನ್, ಸ್ಥಳೀಯ ಮುಖಂಡರಾದ ಸಿದ್ದಪ್ಪ, ಜೈಪ್ರಕಾಶ್, ಇತರರಿದ್ದರು.