ಮದ್ದೂರು ನಗರಸಭೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಜೆಟ್ ಪ್ರತಿಯನ್ನು ಶಾಸಕ ಕೆ.ಎಂ.ಉದಯ್ ಹಾಗೂ ಡಿಸಿ ಡಾ.ಕುಮಾರ ಪ್ರದರ್ಶಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಪೌರಾಯುಕ್ತೆ ಎಸ್.ಎನ್.ರಾಧಿಕಾ ಇದ್ದರು.
- 120 ಕೋಟಿ ರೂ. ಅನುದಾನದ ನಿರೀಕ್ಷೆ
ಮದ್ದೂರು : ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಜೆಟ್ ಅನ್ನು ಸೋಮವಾರ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ಮಂಡಿಸಿದರು.
ಸ್ವಾತಂತ್ರೃದ ಹೋರಾಟದ ಹೆಗ್ಗುರುತಾಗಿರುವ ಮದ್ದೂರು ನಗರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಹಾಗೂ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.
ನಗರಸಭೆ ಕಚೇರಿಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರ ಉಪಸ್ಥಿತಿಯಲ್ಲಿ ಡಿಸಿ ಡಾ.ಕುಮಾರ 20 ಪುಟಗಳ ಬಜೆಟ್ ಮಂಡಿಸಿದರು.
2026-27ನೇ ಸಾಲಿನಲ್ಲಿ ರಾಜ್ಯಸರ್ಕಾರದಿಂದ 75.50 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 120.66 ಕೋಟಿ ರೂ.ಗಳ ನಿರೀಕ್ಷಿತ ಅನುದಾನದ ಜತೆಗೆ ನೌಕರರ ವೇತನ, ನಿರ್ವಹಣಾ ವೆಚ್ಚ, ಬಂಡವಾಳ ಕಾಮಗಾರಿ, ಕಲ್ಯಾಣ ಕಾರ್ಯಕ್ರಮ, ಸರ್ಕಾರಕ್ಕೆ ಪಾವತಿಸಬೇಕಾದ ಕರಗಳು, ಶಾಸನಬದ್ಧ ತೆರಿಗೆ, ನೌಕರರ ವೇತನ ಕಟಾವಣೆ ಸೇರಿದಂತೆ 119.50 ಕೋಟಿ ರೂ. ಅಂದಾಜು ವೆಚ್ಚ ಹಾಗೂ 1.15 ಕೋಟಿ ರೂ. ಉಳಿತಾಯದ ಬಜೆಟ್‌ನಲ್ಲಿ ಪ್ರಸ್ತಾಪಿಸಿದರು.
ನಿಗದಿತ ಸಾಲಿನಲ್ಲಿ ಸ್ವಂತ ಸಂಪನ್ಮೂಲದಿಂದ ಸಂಗ್ರಹಿಸುವ ವರಮಾನದಲ್ಲಿ ಆಸ್ತಿ ತೆರಿಗೆ ಬಹುಮುಖ್ಯವಾದ ಆದಾಯವಾಗಿದೆ. ಈ ಹಿನ್ನೆಲೆಯಲ್ಲಿ ಖಾಲಿ ನಿವೇಶನ, ವಸತಿ, ವಸತಿಯೇತರ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಿಂದ ಬರುವ ಆಸ್ತಿ ತೆರಿಗೆಯಿಂದ 10 ಕೋಟಿ ರೂ. ಹಾಗೂ ತೆರಿಗೆಯೇತರವಾಗಿ 5.88 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಪೌರಾಯುಕ್ತೆ ಎಸ್.ಎನ್.ರಾಧಿಕಾ ಇದ್ದರು.
ಮೂಲಸೌಲಭ್ಯಕ್ಕೆ 40 ಕೋಟಿ ರೂ. ಮೀಸಲು
ನಗರಸಭೆಗೆ ಒಳಪಡುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತು ಹಳ್ಳಿಗಳಲ್ಲಿ ರಸ್ತೆ, ಚರಂಡಿ, ಮಳೆ ನೀರು ಚರಂಡಿ ನಿರ್ಮಾಣ, ಉನ್ನತೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 40 ಕೋಟಿ ರೂ. ಮೀಸಲಿಡಲಾಗಿದೆ. ಸೋಮನಹಳ್ಳಿಗೆ 600 ಲಕ್ಷ ರೂ., ರುದ್ರಾಕ್ಷಿಪುರಕ್ಕೆ 300 ಲಕ್ಷ ರೂ., ಅಗರಲಿಂಗನದೊಡ್ಡಿಗೆ 100 ಲಕ್ಷ ರೂ., ಕೆ.ಕೋಡಿಹಳ್ಳಿಗೆ 100 ಲಕ್ಷ ರೂ., ಚಾಮನಹಳ್ಳಿ ಹಾಗೂ ಆಶ್ರಯ ಬಡಾವಣೆಗೆ 1400 ಲಕ್ಷ ರೂ., ದೇಶಹಳ್ಳಿಗೆ 350 ಲಕ್ಷ ರೂ., ಚಾಪುರದೊಡ್ಡಿಗೆ 100 ಲಕ್ಷ ರೂ., ಗೆಜ್ಜಲಗೆರೆಗೆ 500 ಲಕ್ಷ ರೂ., ಗೊರವನಹಳ್ಳಿಗೆ 500 ಲಕ್ಷ ರೂ ಹಾಗೂ ಮರಕಾಡುದೊಡ್ಡಿ ಗ್ರಾಮದ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ 50 ಲಕ್ಷ ರೂ. ನೀಡಲಾಗಿದೆ.
ಇದಲ್ಲದೆ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಮತ್ತು ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಗಾಗಿ 80 ಲಕ್ಷ ರೂ. ಬಳಸಲಾಗುತ್ತಿತ್ತು. ಇದನ್ನು 2026-27ನೇ ಸಾಲಿಗೆ 150 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅಂತೆಯೇ ನೀರು ಸರಬರಾಜು ವ್ಯವಸ್ಥೆಯ ವಿದ್ಯುತ್ ಬಿಲ್ ಪಾವತಿಗೆ 400 ಲಕ್ಷ ರೂ. ಮೀಸಲು, 2024ರಲ್ಲಿ ಚಾಲನೆಗೊಂಡಿದ್ದ 24*7 ನೀರು ಸರಬರಾಜು ಕಾಮಗಾರಿಯನ್ನು 6,160 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ಕಾಮಗಾರಿಯಲ್ಲಿನ ನ್ಯೂನತೆ ಸರಿಪಡಿಸಿ 26-27ನೇ ಸಾಲಿನಲ್ಲಿ ಲೋಕಾರ್ಪಣೆ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಇನ್ನು ನಗರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 2026-27ನೇ ಸಾಲಿನ ಮೊದಲನೇ ಹಂತದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ವಿಸ್ತೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಕೊಳವೆ ಮಾರ್ಗವನ್ನು ಬದಲಿಸುವುದು, ಕೊಲ್ಲಿ ವೃತ್ತದಲ್ಲಿರುವ ತೇವ ಬಾವಿಯನ್ನು ಎತ್ತರಿಸುವುದು, ರೇಚಕ ಯಂತ್ರ ಅಳವಡಿಸುವುದು ಹಾಗೂ ಹಾಲಿ ಇರುವ 6.0 ಎಂಎಲ್‌ಡಿ ಸಾಮರ್ಥ್ಯದ ಡಬ್ಲುೃಎಸ್‌ಪಿ ಎಕ್ಸ್‌ಟೆಂಡೆಡ್ ಏರಿಯೇಟರ್ ತಾಂತ್ರಿಕತೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ತೃತೀಯ ಹಂತದ ಸಂಸ್ಕರಣಾ ಘಟಕ ನಿರ್ಮಿಸುವ 1,649 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಇನ್ನು ಒಳಚರಂಡಿ ವ್ಯವಸ್ಥೆಯ ವಾರ್ಷಿಕ ದುರಸ್ತಿ ಹಾಗೂ ನಿರ್ವಹಣೆಗೆ 60 ಲಕ್ಷ ರೂ. ಮೀಸಲಿಡಲಾಗಿದೆ. ಚಾಮನಹಳ್ಳಿ ಆಶ್ರಯ ಬಡಾವಣೆಯಲ್ಲಿ ಹೊಸದಾಗಿ ವಿಕೇಂದ್ರೀಕೃತ ಎಸ್‌ಟಿಪಿ ನಿರ್ಮಾಣ ಕಾಮಗಾರಿಗೆ 115 ಲಕ್ಷ ರೂ. ಮೀಸಲಿಟ್ಟು ಅನುಷ್ಠಾನಗೊಳಿಸುವುದಾಗಿ ಘೋಷಣೆ ಮಾಡಲಾಗಿದೆ. ಜತೆಗೆ ನಗರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಪೂರ್ಣ ಪ್ರಮಾಣದ ಸುಸಜ್ಜಿತ ಒಳಚರಂಡಿ ಸೌಲಭ್ಯ ಕಲ್ಪಿಸಲಾಗುವುದು.
ಪ್ಲಾಸ್ಟಿಕ್ ಬಾಟಲ್ ರಿವರ್ಸ್ ವೆಂಡಿಂಗ್ ಮಷಿನ್ ಖರೀದಿ
ಸಾಂಪ್ರದಾಯಿಕ ಬೀದಿದೀಪಗಳನ್ನು ಬದಲಿಸಿ ಎಲ್‌ಇಡಿ ಬೀದಿ ದೀಪಗಳಾಗಿ ಬದಲಿಸುವುದಾಗಿ ತಿಳಿಸಲಾಗಿದೆ. ಈ ಮೂಲಕ ಶೇ.50ರಷ್ಟು ವಿದ್ಯುತ್ ಶುಲ್ಕ ಉಳಿತಾಯವಾಗಲಿದೆ. ಇದಲ್ಲದೆ ನಗರ ಸೇರಿದಂತೆ ವ್ಯಾಪ್ತಿಗೊಳಪಡುವ ಗ್ರಾಮದಲ್ಲಿ ಬೀದಿ ದೀಪ ದುರಸ್ತಿ ಹಾಗೂ ನಿರ್ವಹಣೆಗೆ 60 ಲಕ್ಷ ರೂ. ಮೀಸಲಿಡಲಾಗಿದೆ. ಅಂತೆಯೇ ಹೊಸದಾಗಿ ಕಂಬ ಹಾಗೂ ಬೀದಿ ದೀಪ ಅಳವಡಿಕೆ ಸೇರಿದಂತೆ ಅವಶ್ಯಕವಿರುವ ವಿದ್ಯುತ್ ಕಾಮಗಾರಿ ಮಾಡಲು 50 ಲಕ್ಷ ರೂ. ನೀಡಲಾಗಿದೆ. ಮುಖ್ಯ ರಸ್ತೆಗೆ ಅಲಂಕಾರಿಕ ಮತ್ತು ಪಾರಂಪರಿಕ ವಿದ್ಯುತ್ ಕಂಬ, ಉದ್ಯಾನಗಳಿಗೆ ಸೋಲಾರ್ ವಿದ್ಯುತ್ ದೀಪ ಅಳವಡಿಕೆ, ನಗರಸಭೆ ಕಟ್ಟಡಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಿ, ಸ್ವಯಂ ವಿದ್ಯುತ್ ಉತ್ಪಾದನೆ ಮಾಡಲಾಗುವುದೆಂದು ತಿಳಿಸಲಾಗಿದೆ.
ಇನ್ನು ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾಂಟ್ರಾಕ್ಟರ್ ವಾಹನ, ಸ್ಟ್ರೀಟ್ ಸ್ವೀಪಿಂಗ್ ಯಂತ್ರ ಹಾಗೂ ಘನ ತ್ಯಾಜ್ಯ ವಸ್ತು ನಿರ್ವಹಣಾ ಘಟಕದಲ್ಲಿ ಹೆಚ್ಚುವರಿ ತ್ಯಾಜ್ಯ ಸಂಸ್ಕರಣಾ ಟ್ರಾಮೆಲ್ ಯಂತ್ರವನ್ನು ಸಿಎಸ್‌ಆರ್ ಅನುದಾನ 200 ಲಕ್ಷ ರೂ.ಗಳಲ್ಲಿ ಖರೀದಿಸಲಾಗುವುದು. ಜತೆಗೆ 10 ಹಳ್ಳಿಯಲ್ಲಿಯೂ ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಡಿಪಿಆರ್ ಸಿದ್ಧಪಡಿಸಲಾಗುವುದು. ನಗರಸಭೆ ವ್ಯಾಪ್ತಿಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪ್ರಮುಖ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲಿ ರಿವರ್ಸ್ ವೆಂಡಿಂಗ್ ಮೆಷನ್ ಖರೀದಿಸಿ ಅಳವಡಿಸಲು ಹಾಗೂ ಪ್ರತಿ ಮನೆಗೆ ಬಟ್ಟೆ ಬ್ಯಾಗ್ ಖರೀದಿಸಿ ನೀಡಲು 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
ಟಿ.ಬಿ. ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ಪೇಟೆ ಬೀದಿ ರಸ್ತೆಯನ್ನು 14,859 ಲಕ್ಷ ರೂ. ವೆಚ್ಚದಲ್ಲಿ 80 ಅಡಿ ವಿಸ್ತರಣೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವುದು. ಅಂತೆಯೇ ಕೆಮ್ಮಣ್ಣು ಕಾಲುವೆಯನ್ನು ಕಟ್ ಆ್ಯಂಡ್ ಕವರ್ ಮಾದರಿಯಲ್ಲಿ ನಿರ್ಮಿಸಲು 9000 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. ಇದನ್ನು 202627ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ. ಇದಲ್ಲದೆ ಚಾಮನಹಳ್ಳಿ ನಾಲೆ, ಬೈರನ್ ನಾಲೆ ಹಾಗೂ ವೈದ್ಯನಾಥಪುರ ನಾಲೆ ಆಧುನೀಕರಣಕ್ಕೆ 4,590 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ಪಡೆದಿದ್ದು, ಈ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದ್ದಾರೆ.
- ನಗರದ ಇಕ್ಕೆಲ, ಉದ್ಯಾನದಲ್ಲಿ ಆಕರ್ಷಕ ಅಲಂಕಾರಿಕ ಗಿಡ ನೆಟ್ಟು ಪೋಷಿಸಲು 10 ಲಕ್ಷ ರೂ.
- ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ.
- ಸೋಮನಹಳ್ಳಿ ಕೆರೆ, ದೇಶಹಳ್ಳಿ ಕೆರೆಗೆ ತ್ಯಾಜ್ಯ ಸೇರದಂತೆ, ಹೂಳೆತ್ತುವುದು, ಪಾದಚಾರಿ ಮಾರ್ಗ ನಿರ್ಮಾಣ, ಬೀದಿದೀಪ ಸೇರಿದಂತೆ ಕೆರೆಗಳ ಪುನಶ್ಚೇತನದ ಜತೆಗೆ ಸೌಂದರ್ಯೀಕರಣಕ್ಕೆ 10 ಕೋಟಿ ರೂ.
- ಹಳೆಯ ಬಸ್ ನಿಲ್ದಾಣದ ಮೈದಾನದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 9 ಕೋಟಿ ರೂ.
- ನಾಲ್ಕು ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 4 ಕೋಟಿ ರೂ. * ಸ್ಮಶಾನಗಳ ಸಂಪೂರ್ಣ ಅಭಿವೃದ್ಧಿಗೆ 1.20 ಕೋಟಿ ರೂ.
- ಸ್ವಾಗತ ಕಮಾನುಗಳ ನಿರ್ಮಾಣಕ್ಕೆ 1 ಕೋಟಿ ರೂ
- ನಗರಸಭೆಯ ಭೌತಿಕ ಕಡತವನ್ನು ಡಿಜಿಟಲ್‌ಗಳಾಗಿ ಬದಲಿಸಲು, ದಾಖಲೆಗಳ ಸುರಕ್ಷತೆಗೆ ಹಾಗೂ ಗಣಕೀರಣಕ್ಕಾಗಿ 80 ಲಕ್ಷ ರೂ.
- ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ಹಾಕುವುದು, ಶೆಲ್ಟರ್ ನಿರ್ಮಾಣಕ್ಕೆ 45 ಲಕ್ಷ ರೂ.
- ಶಿವಪುರ ಗ್ರಾಮದ ಪರಿಮಿತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 4 ಕೋಟಿ ರೂ.
- ನಗರ ವ್ಯಾಪ್ತಿಯ ಎಲ್ಲ ಕಲ್ಯಾಣಿಯನ್ನು ಮಳೆ ನೀರು ಕೊಯ್ಲು ಮಾದರಿ ಅಭಿವೃದ್ಧಿಗೆ 50 ಲಕ್ಷ ರೂ.
- ನಮ್ಮ ಕ್ಲಿನಿಕ್‌ಗೆ ಸೌಲಭ್ಯ ಕಲ್ಪಿಸಲು 30 ಲಕ್ಷ ರೂ.
- ಪಿಪಿಪಿ ಮಾದರಿಯಲ್ಲಿ ಐದು ಕಡೆ ಅತ್ಯಾಧುನಿಕ ಶೌಚಗೃಹ ನಿರ್ಮಿಸಲು 90 ಲಕ್ಷ ರೂ
ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ
ಸುಮಾರು 23 ವರ್ಷದ ನಂತರ ನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗಿದೆ. ಎಲ್ಲ ವರ್ಗದ ಜನರ ಹಾಗೂ ವಲಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಲೋಕೋಪಯೋಗಿ, ನೀರಾವರಿ ಇಲಾಖೆಗಳ ಅನುದಾನ ಸದ್ಬಳಕೆ ಮಾಡಿಕೊಂಡು ನಗರವನ್ನು ಸ್ವಚ್ಛ ಹಾಗೂ ಹಸಿರು ನಗರವನ್ನಾಗಿ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ನಗರಸಭೆಗೆ ಹೊಸದಾಗಿ ಸೇರಿರುವ ಗ್ರಾಪಂ ವ್ಯಾಪ್ತಿ ಹಳ್ಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಜತೆಗೆ 24*7 ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.