ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಮುದ್ರಣಕಾರರಾದ ಎ.ಎಂ.ಗಿರೀಶ್ ಹಾಗೂ ಜೆ.ಎನ್.ಮುಕುಂದರಾವ್ ಅವರನ್ನು ಅಭಿನಂದಿಸಲಾಯಿತು.  
ಮಂಡ್ಯ

ಮುದ್ರಣಕಾರರೊಂದಿಗೆ ಸಭೆ ಆಯೋಜನೆ ಶೀಘ್ರ: ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ನಗರದ ಕರ್ನಾಟಕ ಸಂಘದಲ್ಲಿ ಆಯೋಜನೆ
  • ಹಿರಿಯ ಮುದ್ರಣಕಾರರಿಗೆ ಸನ್ಮಾನ
ಮಂಡ್ಯ: ಪ್ರತಿ ಹುದ್ದೆಗೂ ತನ್ನದೇ ಆದ ಗೌರವ ಹಾಗೂ ಜವಾಬ್ದಾರಿ ಇದೆ. ಅದರಂತೆ ಮುದ್ರಣವೂ ಕೂಡ ಶ್ರೇಷ್ಟ ಉದ್ಯೋಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜಿ.ಶೋಭಾರಾಣಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದಿಂದ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ಸವಿನೆನಪಿನಲ್ಲಿ ಆಯೋಜಿಸಿದ್ದ ಮುದ್ರಣಕಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮುದ್ರಣಕಾರರು ತಮಗೆ ವಹಿಸಿದ ಕೆಲಸವನ್ನು ಹೊಸ ಹೊಸ ವಿನ್ಯಾಸದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಆದರೂ ಅವರನ್ನು ಗುರುತಿಸಿ ಪ್ರೋತ್ಸಾಹಿಸುವವರು ಕಡಿಮೆ. ಯಾವುದೇ ಕ್ಷೇತ್ರದಲ್ಲಿ ಯಾರೂ ಬೃಹಸ್ಪತಿಗಳಲ್ಲ. ಕಲಿಯುವುದು ಸಾಕಷ್ಟಿದೆ, ಮುದ್ರಣಕಾರರು ಸಹ ಹೊಸ ಸಂಶೋಧನೆಗಳಿಗೆ ತಕ್ಕಂತೆ ತಮ್ಮ ಕೆಲಸದ ಕೌಶಲತೆಯನ್ನು ಸುಧಾರಿಸಿಕೊಳ್ಳುತ್ತಾ ಸಾಗಬೇಕು ಎಂಬ ಕಿವಿಮಾತು ಹೇಳಿದರು.
ನಿಮ್ಮ ಮುದ್ರಣ ಕಾರ್ಯದ ಸಂದರ್ಭದಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಬಯಸಿ ಹಲವರು ಕರಪತ್ರಗಳನ್ನು ಮುದ್ರಿಸಿ ಹಂಚುವವರು ಇದ್ದಾರೆ. ಅಂತಹ ವಿಷಯಗಳು ಮುದ್ರಣಕ್ಕೆ ಬಂದಾಗ ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಅಂತಹವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಬಳಸುವ ಮೈಕ್ರೋ ಪ್ರಿಂಟಿಂಗ್‌ಗೂ ಕಡಿವಾಣ ಹಾಕಬೇಕು. ಇದರಿಂದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಸಂಬಂಧ ಮುದ್ರಣಕಾರರ ಸಂಘದವರೊಂದಿಗೆ ಸಮಾಲೋಚನಾ ಸಭೆ ಕರೆಯಲಾಗುವುದು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಐದಾರು ದಶಕದಿಂದ ಮುದ್ರಣ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿರುವ ತಾವು ಸಂಘಟನೆಯ ಮೂಲಕವು ಕೆಲಸ ಮಾಡುತ್ತಿದ್ದೇನೆ. ಒಬ್ಬ ವ್ಯಕ್ತಿ ಸಾಧಿಸಲಾರದ ಕೆಲಸವನ್ನು ಸಂಘ ಶಕ್ತಿಯ ಮೂಲಕ ಮಾಡಬಹುದು. ಸಮೂಹದ ಮೂಲಕ ಮಾಡುವ ಸಾಧನೆ ಮಹತ್ವಪೂರ್ಣವಾದುದು. ಈ ನಿಟ್ಟಿನಲ್ಲಿ ಮುದ್ರಣಕಾರರು ಸಂಘದ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಬದಲಾವಣೆ ಪ್ರಗತಿಯ ಸಂಕೇತ. ಮುದ್ರಣಕಾರರು ಬದಲಾವಣೆಗಳಿಗೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮವಾಗಿ ಮುದ್ರಣ ಕಾರ್ಯ ನಿರ್ವಹಿಸಬೇಕು. ಮುದ್ರಣ ಕಾರ್ಯದಲ್ಲಿ ಶ್ರೇಷ್ಟತೆ ಹಾಗೂ ವಿಶಿಷ್ಟತೆ ಸಾಧಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮೀ ನಾರಾಯಣ್, ರಾಜ್ಯ ಮುದ್ರಣಕಾರರ ಸಂಘದ ಉಪ ಸಂಚಾಲಕ ಎಂ.ಎಸ್.ಸತೀಶ್, ಸಂಘದ ರವೀಂದ್ರ ಇತರರಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಜೋಹಾನ್ಸ್ ಗುಟೆನ್ ಬರ್ಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಹಿರಿಯ ಮುದ್ರಣಕಾರರು ಹಾಗೂ ಅರಕೆರೆ ಕಸ್ತೂರಬಾ ಗಾಂಧಿ ವೃದ್ಧ ಸೇವಾಶ್ರಮದ ಯೋಜನಾಧಿಕಾರಿ ಎ.ಎಂ.ಗಿರೀಶ್ ಹಾಗೂ ಹಿರಿಯ ಮುದ್ರಣಕಾರ ಜೆ.ಎನ್.ಮುಕುಂದರಾವ್ ಅವರನ್ನು ಅಭಿನಂದಿಸಲಾಯಿತು.