ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀ ನಾರಾಯಣ್ ಮಾತನಾಡಿದರು.
- ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜನೆ
- ಶಾಸಕ ಪಿ.ರವಿಕುಮಾರ್ ಗಣಿಗ ಸೇರಿದಂತೆ ಹಲವು ಗಣ್ಯರು ಭಾಗಿ
ಮಂಡ್ಯ: ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ಸವಿನೆನಪಿನಲ್ಲಿ ಫೆ.24ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮುದ್ರಣಕಾರರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀ ನಾರಾಯಣ್ ತಿಳಿಸಿದರು.
ಚಿನ್ನದ ಕೆಲಸ ಮಾಡುತ್ತಿದ್ದ ಜೋಹಾನ್ಸ್ ಗುಟೆನ್ ಬರ್ಗ್ ಅವರು ಬೈಬಲ್ ಪ್ರತಿಗಳನ್ನು ಇತರರಿಗೆ ಒದಗಿಸುವ ಉದ್ದೇಶದಿಂದ ಕಬ್ಬಿಣದಿಂದ ಮುದ್ರಣದ ಅಚ್ಚುಗಳನ್ನು ತಯಾರಿಸಿ ಒಂದು ರೂಪ ಕೊಟ್ಟು ಮುದ್ರಣ ಮಾಡುವ ವಿಧಾನ ಕಂಡು ಹಿಡಿದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಲಿದ್ದು, ಸಂಘದ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ರಾಜ್ಯ ಮುದ್ರಣಕಾರರ ಸಂಘದ ಉಪ ಸಂಚಾಲಕ ಎಂ.ಎಸ್.ಸತೀಶ್, ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಉಪಸ್ಥಿತರಿರುವರು. ಇದೇ ವೇಳೆ ಹಿರಿಯ ಮುದ್ರಣಕಾರ ಎ.ಎಂ.ಗಿರೀಶ್, ಅಂಗವಿಕಲ ಮುದ್ರಣಾಕಾರ ಜೆ.ಎನ್.ಮುಕುಂದರಾವ್ ಅವರನ್ನು ಅಭಿನಂದಿಸಲಾಗುವುದು ಎಂದು ವಿವರಿಸಿದರು.
ಸಂಘದ ರಾಜ್ಯ ಸಂಚಾಲಕ ಎಂ.ಎಸ್.ಸತೀಶ್, ಕಾರ್ಯದರ್ಶಿ ಆರ್.ರವೀಂದ್ರ ಇದ್ದರು.