ಮಂಡ್ಯ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನರರೋಗ ತಜ್ಞ ಡಾ.ಎ.ಆರ್.ಮಕ್ಸೂದ್ ಅಹಮದ್ ಮಾತನಾಡಿದರು. 
ಮಂಡ್ಯ

ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆ: ಮಣಿಪಾಲ್ ಆಸ್ಪತ್ರೆ ಹೃದಯ ತಜ್ಞ ವೈದ್ಯ ಡಾ.ಸಿ.ಬಿ.ಕೇಶವಮೂರ್ತಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಜೀವನ ಶೈಲಿಯಿಂದಾಗಿ ಸಮಸ್ಯೆ
  • ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು
ಮಂಡ್ಯ: ಆಧುನಿಕ ಜೀವನ ಶೈಲಿಯಿಂದಾಗಿ ಹಠಾತ್ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣಗೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತು ಅತ್ಯಮೂಲ್ಯ ಸಮಯದಲ್ಲಿ ಆಸ್ಪತ್ರೆಗೆ ಕರೆತಂದರೆ ರೋಗಿಯ ಪ್ರಾಣವನ್ನು ರಕ್ಷಿಸಲು ಅವಕಾಶಗಳಿರುತ್ತವೆ ಎಂದು ಮೈಸೂರಿನ ಮಣಿಪಾಲ್ ಆಸ್ಪತ್ರೆ ಹೃದಯ ತಜ್ಞ ಡಾ.ಸಿ.ಬಿ.ಕೇಶವಮೂರ್ತಿ ಹೇಳಿದರು.
ಯುವಕರು ಹಾಗೂ ಮಧ್ಯಮ ವಯಸ್ಕರಲ್ಲಿ ಉಂಟಾಗುತ್ತಿರುವ ಹೃದಯಾಘಾತಗಳನ್ನು ತಡೆಯಲು ಮಣಿಪಾಲ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಮಧುಮೇಹಿ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ನಿರ್ಲಕ್ಷೃ ಮಾಡದೇ ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಜನರಿಗೆ ತುರ್ತು ಹೃದಯ ಸಂಬಂಧಿ ಕಾಯಿಲೆಯ ಅರಿವಿದೆ. ಆದರೆ ಮಿದುಳಿನ ತುರ್ತು ಪರಿಸ್ಥಿತಿ ಅಥವಾ ಪಾರ್ಶ್ವವಾಯು ಲಕ್ಷಣದ ಬಗ್ಗೆ ಅರಿವಿಲ್ಲದಾಗಿದೆ. ಇದರಿಂದ ಚಿಕಿತ್ಸೆ ವಿಳಂಬ ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗಿರುವುದು ಕಳವಳಕಾರಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ನರರೋಗ ತಜ್ಞ ಡಾ.ಎ.ಆರ್.ಮಕ್ಸೂದ್ ಅಹಮದ್ ಮಾತನಾಡಿ, ತಲೆಗೆ ತೀವ್ರ ತರನಾದ ಪೆಟ್ಟಾದಾಗ ನಿರ್ಲಕ್ಷಿಸದೇ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ. ಮೊದಲ ಎರಡು ಗಂಟೆಯಲ್ಲಿ ರೋಗಿಯ ಸ್ಥಿತಿ ಅವಲೋಕಿಸಿ ಆರಂಭಿಕ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಎರಡನೇ ಹಂತದ ಬ್ರೈನ್ ಡ್ಯಾಮೇಜ್‌ಗೆ ಬಿಇ-ಎಫ್‌ಎಎಸ್‌ಟಿ ವಿಧಾನದ ಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಅರಿತು, ದೇಹದ ಸ್ಥಿರತೆ, ಕಣ್ಣೋಟ, ಮುಖ ಭಾಗದಲ್ಲಿ ಸೆಳೆತ, ಅಂಗಾಂಗಗಳ ನಡಗುವಿಕೆ, ತೊದಲುವಿಕೆಗಳನ್ನು ಉತ್ತಮ ಚಿಕಿತ್ಸೆ ನೀಡಿ ಉಪಚರಿಸಬಹುದಾಗಿದೆ. ಜೀವನ ಶೈಲಿ ಹಾಗೂ ಧೂಮಪಾನ, ಮದ್ಯಪಾನ ಹಾಗೂ ಇತರೆ ದುಶ್ಚಟ ಮತ್ತು ರಸ್ತೆ ಅಪಘಾತಗಳ ಸಂದರ್ಭದಲ್ಲಿ ಉಂಟಾಗುವ ತೀವ್ರ ತರದ ತಲೆ ಪೆಟ್ಟುಗಳ ಬಗ್ಗೆ ನಿರ್ಲಕ್ಷೃ ಬೇಡ ಎಂದರು.
ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಅಥವಾ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಣಿಪಾಲ್ ಫೌಂಡೇಷನ್‌ನಿಂದ ಸಂಸ್ಥೆ ಸಿಆರ್‌ಎಸ್ ನಿಧಿಯಿಂದ 1.5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚಕ್ಕೆ ನೆರವು ಮಾಡಲಾಗುವುದು. ಪ್ರತಿ ತಿಂಗಳು ಈ ರೀತಿ 45 ರಿಂದ 50 ಲಕ್ಷ ರೂ.ಗಳ ವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿದೆ ಎಂದರು.
ಡಾ.ಉಪೇಂದ್ರ ಶೆಣೈ ಉಪಸ್ಥಿತರಿದ್ದರು.