ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿಇಒ ಯಶಸ್ವಿನಾಗ್ ಮಾತನಾಡಿದರು.  
ಮಂಡ್ಯ

ಸ್ಟಾರ್ಟಪ್ ಚಟುವಟಿಕೆಗೆ ಉತ್ತೇಜನ: ಇಂಕ್ಯುಬೇಟರ್ ಫೌಂಡೇಷನ್ ಸಂಸ್ಥೆ ಸಿಇಒ ಯಶಸ್ವಿನಾಗ್

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜಿಎಸ್‌ಎಸ್‌ಎಸ್ ಟೆಕ್ನಾಲಜಿ ಬಿಜಿನೆಸ್ ಇಂಕ್ಯುಬೇಟರ್ ಫೌಂಡೇಷನ್ ಸಂಸ್ಥೆಯಿಂದ ಮಾರ್ಗದರ್ಶನ ಮತ್ತು ಬೆಂಬಲ
  • ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ನಿಧಿ-ಐಟಿಬಿಐ’ ಯೋಜನೆಯಡಿ ಕೆಲಸ
ಮಂಡ್ಯ: ಸ್ವಯಂ ಉದ್ಯೋಗಗಳ ಸ್ಟಾರ್ಟಪ್ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಎಸ್‌ಎಸ್‌ಎಸ್ ಟೆಕ್ನಾಲಜಿ ಬಿಜಿನೆಸ್ ಇಂಕ್ಯುಬೇಟರ್ ಫೌಂಡೇಷನ್ ಸಂಸ್ಥೆಯಿಂದ ಮಾರ್ಗದರ್ಶನ ಮತ್ತು ಬೆಂಬಲ ಒದಗಿಸಲಾಗುತ್ತಿದೆ ಎಂದು ಸಂಸ್ಥೆ ಸಿಇಒ ಯಶಸ್ವಿನಾಗ್ ತಿಳಿಸಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ನಿಧಿ-ಐಟಿಬಿಐ’ ಯೋಜನೆಯಡಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತಂತ್ರಜ್ಞಾನ ಆಧಾರಿತ ಸ್ಟಾರ್ಟಪ್‌ಗಳಿಗೆ ನೆರವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿ, ಆಹಾರ, ಆರೋಗ್ಯ ಕ್ಷೇತ್ರಗಳಲ್ಲಿ ವಿನೂತನ ರೀತಿಯ ಉದ್ಯಮಗಳ ಆರಂಭಕ್ಕೆ ಮೂಲ ಸೌಕರ್ಯ, ಮಾರ್ಗದರ್ಶನ, ನೆಟ್ವರ್ಕಿಂಗ್, ಮಾರುಕಟ್ಟೆ ಸಂಪರ್ಕ ಮತ್ತು ಅನುದಾನ ಮಾರ್ಗದರ್ಶನ ನೀಡಲಾಗುವುದು. ಈಗಾಗಲೇ ಸಂಸ್ಥೆಯಿಂದ 10 ಸ್ಟಾರ್ಟಪ್ ಕಂಪನಿಗಳು ಆರಂಭಗೊಂಡು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ 10 ಲಕ್ಷ ರೂವರೆಗೆ ಸ್ಟಾರ್ಟಪ್ ಅನುದಾನ, ಆಹಾರ ಸಂಸ್ಕರಣೆ ಉದ್ಯಮದಲ್ಲಿ ತೊಡಗಿರುವವರು ಸಂಸ್ಥೆಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ಬಳಕೆಗೆ ಅವಕಾಶ, ವ್ಯವಹಾರ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ, ಹೂಡಿಕೆದಾರರ ಸಂಪರ್ಕ ಮತ್ತು ಅನುದಾನಕ್ಕೆ ಸೂಕ್ತ ಸಹಾಯ ಒದಗಿಸಲಾಗುವುದು ಎಂದು ವಿವರಿಸಿದರು.
ಕಾಲೇಜು ಹಂತದಲ್ಲಿನ ಕ್ರಿಯಾತ್ಮಕ ಆಲೋಚನೆಯುಳ್ಳ ವಿದ್ಯಾರ್ಥಿಗಳಿಗೆ ಕೃಷಿ ಆಧಾರಿತ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಮಾ.13ರಂದು ಜಿಎಸ್‌ಎಸ್‌ಎಸ್‌ಐಇಟಿಡಬ್ಲುೃ ಆವರಣದಲ್ಲಿ ‘ಟೆಕ್ನಾಲಜಿ ಚಾಲೆಂಜ್’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಗವಹಿಸುವ ತಂಡದಲ್ಲಿ 1 ರಿಂದ ಐವರಿರಬೇಕು. 1,500 ರೂ ಪ್ರವೇಶ ಶುಲ್ಕ ಪಾವತಿಸಬೇಕು. ಅತ್ಯುತ್ತಮ ಯೋಜನೆಗಳಿಗೆ 50 ಸಾವಿರ ರೂ ನಗದು ಬಹುಮಾನ, 10 ಉತ್ತಮ ಯೋಜನೆಗಳ ಸ್ಟಾರ್ಟಪ್‌ಗೆ ಸಹಕಾರ ಹಾಗೂ ಉದ್ಯಮಗಳ ಪ್ರವೇಶಕ್ಕೆ ಉತ್ತೇಜನ ನೀಡಲಾಗುವುದು ಎಂದು ವಿವರಿಸಿದರು.
ಸಂಸ್ಥೆಯ ಅಶೋಕಾನಂದ, ಸಂಜಯ್ ಪಾಂಡೆ ಇದ್ದರು.