ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿದರು.
- ಫೆ.19ರಂದು ಸಂಜೆ 5.30ಕ್ಕೆ ನಗರದ ಪ್ರದಾನ ಸಮಾರಂಭ
- ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾಹಿತಿ
ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ 13ನೇ ವರ್ಷದ ಡಾ.ಹಾಮಾನ ಜಾನಪದ ಹಿರಿಯ ಪ್ರಶಸ್ತಿಗೆ ತುಮಕೂರು ಜಿಲ್ಲೆ ದಂಡಿನಶಿವರದ ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಹಾಗೂ ಜಾನಪದ ಯುವ ಪ್ರಶಸ್ತಿಗೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಹೇಳಿದರು.
ಫೆ.19ರಂದು ಸಂಜೆ 5.30ಕ್ಕೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಡಾ.ಡಿ.ಕೆ.ರಾಜೇಂದ್ರ ಅವರಿಗೆ 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಡಾ.ಎಂ.ಕೆಂಪಮ್ಮ ಅವರಿಗೆ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅಧ್ಯಕ್ಷತೆಯಲ್ಲಿ ಮಂಡ್ಯ ವಿವಿಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡುವರು. ಉದ್ಯಮಿ ವಿವೇಕ ಹೆಗ್ಗಡೆ ಭಾಗವಹಿಸುವರು ಎಂದು ವಿವರಿಸಿದರು.
21, 22ರಂದು ಕನ್ನಡ ಸಂಶೋಧನಾ ಕಮ್ಮಟ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ‘ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ’ವನ್ನು ಫೆ.21 ಮತ್ತು 22ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ. 21ರಂದು ಬೆಳಗ್ಗೆ 10 ಗಂಟೆಗೆ ವಿದ್ವಾಂಸ ಡಾ.ರಾಗೌ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ ಭಾಗವಹಿಸುವರು ಎಂದರು.
ಮಧ್ಯಾಹ್ನ 2 ಗಂಟೆಗೆ ಸಂಶೋಧನೆ, ತಾತ್ವಿಕತೆ, ಸ್ವರೂಪ ಕುರಿತು ಗೋಷ್ಠಿ ನಡೆಯಲಿದೆ. ಕುವೆಂಪು ವಿವಿಯ ಹಿರಿಯ ಪ್ರಧ್ಯಾಪಕ ಪ್ರೊ.ಜಿ.ಪ್ರಶಾಂತನಾಯಕ ಹಾಗೂ ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ ಚಂದ್ರಗುತ್ತಿ ವಿಷಯ ಮಂಡನೆ ಮಾಡುವರು. ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ತ್ರಿವೇಣಿ ಸಮನ್ವಯ ನಡೆಸುವರು. ನಂತರ ಕನ್ನಡ ಸಂಶೋಧನೆ; ಹಿನ್ನೋಟ ಕುರಿತು 2ನೇ ಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ. ಎನ್.ಆರ್.ಲಲಿತಾಂಬ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ವಿಷಯ ಮಂಡನೆ ಮಾಡುವರು. ಪಿಇಎಸ್ ಕಾಲೇಜಿನ ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಸಮನ್ವಯ ನಡೆಸುವರು ಎಂದು ಹೇಳಿದರು.
22ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಸಂಶೋಧನೆ ಮುನ್ನೋಟ ಕುರಿತು ತುಮಕೂರು ವಿವಿಯ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ, ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರಡಿ ಮಲ್ಲಯ್ಯಕಟ್ಟೇರ ವಿಷಯ ಮಂಡನೆ ಮಾಡುವರು. ಚಿಕ್ಕೋಡಿ ಬೇಡಕಿಹಾಳದ ಕೆಎಂಎಸಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಹೊಂಗಯ್ಯ ಹೊನ್ನಲಗೆರೆ ಸಮನ್ವಯ ನಡೆಸುವರು. ವರ್ತಮಾನದಲ್ಲಿ ಕನ್ನಡ ಭಾಷೆಯ ವಿಸ್ತಾರದ ನೆಲೆಗಳ ಕುರಿತು ದೃಶ್ಯ ಮಾನವಶಾಸ್ತ್ರಜ್ಞ ಡಾ.ಸಿರಿಗಂಧ ಶ್ರೀನಿವಾಸ ಮೂರ್ತಿ ಸರ್ಕಾರಿ ಆರ್.ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸುಭಾಷ್ ರಾಜಮಾನೆ ವಿಷಯ ಮಂಡಿಸುವರು. ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಎಚ್.ಪಿ.ಗೀತಾ ಸಮನ್ವಯ ನಡೆಸುವರು. ಸಂಶೋಧನಾ ಬರಹ: ತಾಂತ್ರಿಕ ಸಂಗತಿಗಳು ವಿಷಯದ ಕುರಿತು ಮೈಸೂರು ಕುವೆಂಪುನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪಿ.ಬೆಟ್ಟೇಗೌಡ, ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಜಾಜಿ ದೇವೇಂದ್ರಪ್ಪ ವಿಷಯ ಮಂಡನೆ ಮಾಡುವರು. ಪಿಇಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್.ವೈ.ಶ್ರೀನಿವಾಸಯ್ಯ ಸಮನ್ವಯ ನಡೆಸುವರು. ನಂತರ ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಸಮಾರೋಪ ಭಾಷಣ ಮಾಡಲಿದ್ದು, ಸಂಸ್ಕೃತಿ ಚಿಂತಕ ಡಾ.ತುಕಾರಾಂ ಭಾಗವಹಿಸಲಿದ್ದಾರೆ ಎಂದು ಹೇಳಿದರು.