ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿದರು.  
ಮಂಡ್ಯ

ಅಭಿವೃದ್ಧಿ ವಿಚಾರದಲ್ಲಿ ಸಮನ್ವಯತೆ ಇರಲಿ: ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ನಗರದಲ್ಲೇ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿ
  • ಒಳಾಂಗಣ ಕ್ರೀಡಾಂಗಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ವಿರೋಧ
ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಪಕ್ಷಗಳೂ ಸಮನ್ವಯತೆಯಿಂದ ಕೆಲಸ ಮಾಡಬೇಕು. ಇದಕ್ಕೆ ಅಧಿಕಾರಿಗಳು ಸರಿಯಾದ ಯೋಜನೆ ರೂಪಿಸಬೇಕು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.
ಖೇಲೋ ಇಂಡಿಯಾದ ಒಳಾಂಗಣ ಕ್ರೀಡಾಂಗಣವನ್ನು ಮಂಡ್ಯ ನಗರದಲ್ಲೇ ನಿರ್ಮಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ನಗರದಿಂದ ಏಳೆಂಟು ಕಿ.ಮೀ ದೂರದ ವಿ.ಸಿ. ಫಾರ್ಮ್ ಕೃಷಿ ವಿಶ್ವವಿದ್ಯಾಲಯದ ಬಳಿ ನಿರ್ಮಿಸುವುದರಿಂದ ಹೆಚ್ಚೇನು ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯದ ಮೈಷುಗರ್ ಪ್ರೌಢಶಾಲಾ ಆವರಣದಲ್ಲಿ 3 ಎಕರೆಯಷ್ಟು ಜಾಗ ಇದೆ. ಜತೆಗೆ ಕಾರ್ಖಾನೆಗೆ ಸೇರಿದ ಈಜುಕೊಳವಿದ್ದು, ಅದು ಸಂಪೂರ್ಣ ಹಾಳಾಗಿದೆ. ಇದನ್ನು ಅಭಿವೃದ್ಧಿಪಡಿಸಿದರೆ ಹೆಚ್ಚು ಯುವಜನರಿಗೆ ಅನುಕೂಲವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಿಸಿದರು.
ಮಂಡ್ಯ ನಗರದಿಂದ 10 ಕಿ.ಮೀ. ದೂರದ ಬಿ.ಹೊಸೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದ್ದು, ಇದು ಅಷ್ಟೇನೂ ಉಪಯೋಗಕ್ಕೆ ಬಾರದಂತಾಗಿದೆ. ಜತೆಗೆ ಇದೇ ಗ್ರಾಮದ ಬಳಿ ಗಾಂಧಿಭವನ ನಿರ್ಮಿಸಿ ಬಾಗಿಲು ಹಾಕಲಾಗಿದ್ದು, ಇದೀಗ ಅದನ್ನು ಪ್ರಾರಂಭಿಸಲಾಗಿದೆ. ಆದರೂ ಅಲ್ಲೂ ಯಾವುದೇ ಕಾರ್ಯಕ್ರಮಗಳು ನಿತ್ಯ ನಡೆಯುವುದಿಲ್ಲ. ಇದಕ್ಕೆ ಈ ಮಾರ್ಗದಲ್ಲಿ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಇರುವುದರಿಂದ ಅನುಕೂಲಕರವಾಗಿಲ್ಲ. ಇದೇ ರೀತಿ ಖೇಲೋ ಇಂಡಿಯಾ ಕ್ರೆಡಾಂಗಣ ಸಹ ಆಗಬಹುದು. ಎಚ್.ಡಿ.ಕುಮಾರಸ್ವಾಮಿ ಅವರು ದೂರದೃಷ್ಟಿಯ ಯೋಜನೆಯನ್ನು ಸ್ವಾಗತಿಸುವುದಾಗಿ ತಿಳಿಸಿದರಾದರೂ, ಅದನ್ನು ನಗರದ ಒಳಭಾಗದಲ್ಲಿ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ಮಾಡುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದ ಜಾಗದಲ್ಲಿ ಕನ್ನಡ ಭವನ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿದ ಅವರು, ಕನ್ನಡ ಭವನ ನಿರ್ಮಾಣಕ್ಕೆ ನಗರದೊಳಗೆ ಸಾಕಷ್ಟು ಜಾಗಗಳಿವೆ. ಅಲ್ಲಿ ನಿರ್ಮಾಣ ಮಾಡಬಹುದು. ಅದು ಬಿಟ್ಟು ಕ್ರೆಡಾ ಚಟುವಟಿಕೆಗೆ ಮೀಸಲಿಟ್ಟ ಜಾಗದಲ್ಲಿ ಭವನ ನಿರ್ಮಿಸುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುಖಂಡರಾದ ಸಂಜು ಆಲಕೆರೆ, ರಾಜೇಂದ್ರಸಿಂಗ್ ಬಾಬು ಇದ್ದರು.