ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಅಧ್ಯಕ್ಷ ಎನ್.ರಾಜೇಂದ್ರಸಿಂಗ್ ಬಾಬು ಮಾತನಾಡಿದರು. 
ಮಂಡ್ಯ

ಅತಿಥಿ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಿಸಲಿ: ಹೋರಾಟ ಸಮಿತಿ ಅಧ್ಯಕ್ಷ ಎನ್.ರಾಜೇಂದ್ರಸಿಂಗ್ ಬಾಬು ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿರುವ ಮಾಜಿ ಯುಜಿಸಿ ಅತಿಥಿ ಉಪನ್ಯಾಸಕರು
  • 10 ದಿನದೊಳಗೆ ಕ್ರಮ ವಹಿಸದಿದ್ದರೆ ಹೋರಾಟ

ಮಂಡ್ಯ: ಅತಿಥಿ ಉಪನ್ಯಾಸಕರನ್ನು ತುರ್ತಾಗಿ ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಅಧ್ಯಕ್ಷ ಎನ್.ರಾಜೇಂದ್ರಸಿಂಗ್ ಬಾಬು ಒತ್ತಾಯಿಸಿದರು.

ಕಳೆದ ವರ್ಷ 3,500ಕ್ಕೂ ಹೆಚ್ಚು ಮಾಜಿ ಯುಜಿಸಿ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪ್ರಸ್ತುತ ಸಾಲಿನಲ್ಲಿಯೂ ನಿರಂತರವಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ನಿರುದ್ಯೋಗ ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಚ್.ಕೆ. ಪಾಟೀಲ್ ಹಾಗೂ ಎಂ.ಆರ್.ಸೀತಾರಾಂ ನೇತೃತ್ವದ ಸರ್ಕಾರದಲ್ಲಿ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ಸೇರ್ಪಡೆಗೊಳಿಸಲು ಆದೇಶ ನೀಡಿದ್ದರು. ಆದರೆ, ಈಗ ಉನ್ನತ ಶಿಕ್ಷಣ ಇಲಾಖೆಯು ಮರು ಆಯ್ಕೆ ಪ್ರಕ್ರಿಯೆ ಮುಂದುವರಿಸುತ್ತಿರುವುದರಿಂದ ಉಪನ್ಯಾಸಕರಲ್ಲಿ ಆತಂಕ ಮೂಡಿದೆ ಎಂದು ಹೇಳಿದರು.
ಕೂಡಲೇ ಕಾಲೇಜು ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಂಯೋಜಕರನ್ನು ಆಯ್ಕೆ ಮಾಡಿಕೊಳ್ಳಬೇಕು. 2025-26ರ ಸೇವೆಯಲ್ಲಿದವರನ್ನು ಕೈಬಿಡದೇ ಎಲ್ಲರನ್ನೂ ಆಯ್ಕೆ ಮಾಡಿಕೊಳ್ಳಬೇಕು. 10 ದಿನದೊಳಗೆ ಕ್ರಮ ವಹಿಸದಿದ್ದರೆ, ರಾಜ್ಯದ ಎಲ್ಲ ಅತಿಥಿ ಉಪನ್ಯಾಸರನ್ನು ಒಗ್ಗೂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂಎದು ಎಚ್ಚರಿಸಿದರು.
ಸಮಿತಿ ಸದಸ್ಯರಾದ ಎಂ.ಎಸ್.ಕೃಷ್ಣ, ಬಿ.ಎಸ್.ಕುಮಾರ್, ಶಿವಕುಮಾರ್ ಇದ್ದರು.