ಹಲಗೂರಿನಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಎಜ್.ಜಿ. ಶ್ರೀನಿವಾಸ್ ಮಾತನಾಡಿದರು. ರಂಗಸ್ವಾಮಿ, ಅರುಣ್ ಕುಮಾರ್, ಎಚ್.ಜಿ. ಪಾರ್ಥಸಾರಥಿ ಇತರಿದ್ದರು.
- ತಾಪಂ ಇಒ ಎಜ್.ಜಿ.ಶ್ರೀನಿವಾಸ್ ಸೂಚನೆ
ಹಲಗೂರು : ಬೇಸಿಗೆ ಕಾಲ ಸಮೀಪಿಸಿದ್ದು ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಿರುವ ಕುಡಿಯುವ ನೀರಿನ ಸರಬರಾಜು ಮತ್ತು ಸಮರ್ಪಕ ನಿರ್ವಹಣೆಗೆ ಸಿದ್ಧರಾಗಿರಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಜಿ.ಶ್ರೀನಿವಾಸ್ ಸೂಚನೆ ನೀಡಿದರು.
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಡರಹಳ್ಳಿ, ನಿಟ್ಟೂರು, ಲಿಂಗಪಟ್ಟಣ, ಎಚ್.ಬಸಾಪುರ, ತೊರೆಕಾಡನಹಳ್ಳಿ, ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಮತ್ತು ವಾಟರ್‌ಮನ್‌ಗಳ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಅಗತ್ಯವಿರುವ ನೀರಿನ ಬಜೆಟ್ ತಯಾರಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಗೂ ಕನಿಷ್ಠ 55 ಎಲ್‌ಪಿಸಿಡಿ ನೀರನ್ನು ಸರಬರಾಜು ಮಾಡಲು ಕ್ರಮವಹಿಸಬೇಕು. ಅಗತ್ಯವಿರುವ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದರೆ ಗ್ರಾಮದ ಸನಿಹದಲ್ಲಿರುವ ಖಾಸಗಿ ವ್ಯಕ್ತಿಗಳ ಒಡೆತನದ ಕೊಳವೆ ಬಾವಿಯಿಂದ ನೀರು ಪಡೆಯಲು ಅಗತ್ಯವಿರುವ ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಜನರು ಮತ್ತು ಜಾನುವಾರುಗಳಿಗೆ ಅಗತ್ಯವಿರುವ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಿಷ್ಠ 5 ಗ್ರಾಮಗಳಲ್ಲಿ 24/7 ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಾಣ ಆಗಿರುವ ಕಾಮಗಾರಿ ಕೆಲಸ, ಪೈಪ್‌ಲೈನ್, ಕೊಳಾಯಿ ಸಂಪರ್ಕ ಕುರಿತ ಲೋಪ ದೋಷಗಳನ್ನು ಗುರುತಿಸಿ ಕೂಡಲೇ ಸರಿಪಡಿಸಲು ಕ್ರಮವಹಿಸಬೇಕು. ಜಾಗ ಮತ್ತಿತರ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಗಮನಹರಿಸಿ ಎಂದು ಎಇಇ ಅವರಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ, ಕಿರಿಯ ಇಂಜಿನಿಯರ್ ಅರುಣ್ ಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎಚ್.ಜಿ.ಪಾರ್ಥಸಾರಥಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುಲ್ನಾಜ್ ಭಾನು, ಸಿ.ಲತಾ, ಅಲಮೇಲಮ್ಮ, ನಾಗೇಂದ್ರ, ಸುಕನ್ಯಾ ಸೋಮಸುಂದರ್, ಶಿವಮ್ಮ, ಪಿಡಿಒ ಕೆ.ಚೆಂದಿಲ್, ಲಿಂಗಯ್ಯ, ಮಲ್ಲಿಕಾರ್ಜುನ, ನಟೇಶ್, ಮಂಗಳಾ, ಬಿಲ್ ಕಲೆಕ್ಟರ್ ಆನಂದ್ ಸೇರಿದಂತೆ ಭಾಗವಹಿಸಿದ್ದರು.