ಮಂಡ್ಯದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ಫೆ.28ರಿಂದ ಮಾ.17ವರೆಗೆ ನಡೆಯಲಿರುವ ಪರೀಕ್ಷೆ
- 14,187 ವಿದ್ಯಾರ್ಥಿಗಳ ನೋಂದಣಿ
- 27 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ
- 580ಕ್ಕೂ ಹೆಚ್ಚು ಕ್ಯಾಮೆರ ಅಳವಡಿಕೆ
ಮಂಡ್ಯ: ಜಿಲ್ಲೆಯಲ್ಲಿ ಫೆ.28ರಿಂದ ಮಾ.17ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಅಂತೆಯೇ ಪರೀಕ್ಷೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಪಾರದರ್ಶಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ಒಟ್ಟು 14,187 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಅಂತೆಯೇ 1,096 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
27 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸಮಯದಲ್ಲಿ ಕೇಂದ್ರ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚಲಾಗುವುದು. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಯನ್ನು ತ್ರಿಸದಸ್ಯ ಸಮಿತಿಯಿಂದ ದೂರದ ಪರೀಕ್ಷಾ ಕೇಂದ್ರಗಳಾದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರಕ್ಕೆ ಮುಂಚಿತವಾಗಿ ತಲುಪಿಸಲಾಗುತ್ತದೆ. ಪ್ರಶ್ನೆಪತ್ರಿಕೆಯನ್ನು ಸಾಗಿಸುವಾಗ ಬೀಗಿ ಭದ್ರತೆಯನ್ನು ಒದಗಿಸಲಾಗುವುದು ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸಾಗುವ ಮಾರ್ಗದಲ್ಲಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳಲ್ಲಿಗೆ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ಕಾಸ್ಟಿಂಗ್ ನಡೆಯಲಿದ್ದು, 10 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಸಿ.ಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿದ್ದು, ಒಟ್ಟು 580ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಪರೀಕ್ಷಾ ಕೊಠಡಿಗಳಿಗೆ ಈಗಾಗಲೇ ಅಳವಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಸಿ.ಸಿ ಕ್ಯಾಮೆರಾ ಕಡ್ಡಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಸಮಯದಲ್ಲಿ ಸಿ.ಸಿ ಕ್ಯಾಮೆರಾದಲ್ಲಿ ತಾಂತ್ರಿಕ ದೋಷ ಉಂಟಾಗದಂತೆ ಕ್ರಮ ವಹಿಸಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಿ.ಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗದಿಂದ ಮಕ್ಕಳು ಬರುವುದರಿಂದ ಬಸ್‌ಗಳು ಪರೀಕ್ಷಾ ದಿನದಂದು ವಿಳಂಬವಾಗದಂತೆ ಕ್ರಮ ವಹಿಸಿ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್‌ಗಳನ್ನು ಕೊಠಡಿಗೆ ತರಲು ಬೀಡಬೇಡಿ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗ ಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಯಾರಿಗೂ ಅನುಮತಿ ನೀಡಬಾರದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ತಹಸೀಲ್ದಾರ್‌ಗಳಾದ ವಿಶ್ವನಾಥ್, ಆದರ್ಶ್, ಅಶೋಕ್, ಚೇತನಾ ಯಾದವ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ ಇತರರಿದ್ದರು.
ಸಮ್ಮೇಳನ ಆಯೋಜನೆಗೆ ಆಕ್ಷೇಪ
ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಫೆ.24ರಂದು ಪ್ರಾಂಶುಪಾಲರ ಸಂಘಟನೆ ಹೆಸರಿನಲ್ಲಿ ಸಮ್ಮೇಳನವನ್ನು ಆಯೋಜಿಸಿರುವುದಕ್ಕೆ ಪಾಲಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಮಯ ವ್ಯಯ ಮಾಡದೆ ಮಕ್ಕಳಿಗೆ ಪರೀಕ್ಷಾ ದೃಷ್ಟಿಯಿಂದ ಪಾಠ ಪ್ರವಚನವನ್ನು ಮಾಡುವ ಮೂಲಕ ಪರೀಕ್ಷೆಗೆ ಸಿದ್ಧಗೊಳಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದರು. ಆದರೆ ಇದೀಗ ಸಮ್ಮೇಳನದ ಹೆಸರಿನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಒಂದೆಡೆ ಸೇರಿಸಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ವಾರ್ಷಿಕ ಪರೀಕ್ಷೆ ಕೇವಲ ಮೂರು ದಿನ ಇರುವಾಗ ಇಂತಹ ಕಾರ್ಯಕ್ರಮದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.