ಮದ್ದೂರು ನಗರದ ಶ್ರೀ ಮದ್ದೂರಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಎಂ.ಸಿ.ನಾಗೇಶ್, ಸೌಭಾಗ್ಯಾ ಮಹದೇವು, ಕೋಕಿಲಾ ಅರುಣ್, ತಮ್ಮೇಗೌಡ, ಶಿವನಂಜು, ಶರತ್, ಮಮತಾಶಂಕರೇಗೌಡ ಇದ್ದರು. 
ಮಂಡ್ಯ

ಮದ್ದೂರು ಉತ್ಸವ ವಿಶೇಷವಾಗಿ ಆಚರಿಸಲು ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ
  • ಪೂರ್ವಭಾವಿ ಸಭೆ
ಮದ್ದೂರು: ನಗರದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮದ್ದೂರು ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಶ್ರೀ ಮದ್ದೂರಮ್ಮ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಮದ್ದೂರಮ್ಮನ ಹಬ್ಬಕ್ಕೆ ಹಾಗೂ ದೇವರಿಗೆ ತನ್ನದೆಯಾದ ವಿಶೇಷ ಮಹತ್ವವಿದ್ದು, ಹಬ್ಬವನ್ನು ಸಂಪ್ರದಾಯದಂತೆ ಹಾಗೂ ಆಕರ್ಷಕವಾಗಿ ಆಚರಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗುವುದು ಎಂದರು.
ಕಳೆದ ಬಾರಿ ನಗರಸಭೆ ವತಿಯಿಂದ ಮದ್ದೂರಮ್ಮನ ಹಬ್ಬಕ್ಕೆ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಗರದಲ್ಲಿ ಮಾಡಿದ್ದ ವಿದ್ಯುತ್ ಅಲಂಕಾರ ಸಾರ್ವಜನಿಕರ ಗಮನ ಸೆಳೆದಿತ್ತು. ಆದ್ದರಿಂದ ಈ ಬಾರಿ ವಿಶೇಷವಾಗಿ ಮದ್ದೂರು ಉತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಮದ್ದೂರು ಉತ್ಸವ ಕೇವಲ ನಗರಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಇಡೀ ತಾಲೂಕಿನ ಜನ ಉತ್ಸವದಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಈ ಹಿಂದೆ ಮದ್ದೂರಮ್ಮನ ಹಬ್ಬ ಕೇವಲ ನಾಲ್ಕೈದು ಬೀದಿಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ಹಾಗಾಗದಂತೆ ನಗರದ ಪ್ರತಿ ಮನೆಯಲ್ಲೂ ಹಬ್ಬ ಆಚರಿಸುವಂತಾಗಬೇಕು ಎಂದರು.
ಕುಣಿಗಲ್, ಕನಕಪುರ, ಚನ್ನಪಟ್ಟಣ ಹಾಗೂ ಬೂದನೂರು ಉತ್ಸವದ ರೀತಿಯಲ್ಲಿ ಮದ್ದೂರು ಉತ್ಸವ ಆಚರಿಸಲಾಗುವುದು. ಇದಕ್ಕೆ ಶ್ರೀಘ್ರವಾಗಿ ತಂಡಗಳನ್ನು ರಚನೆ ಮಾಡಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.
ಮದ್ದೂರು ಉತ್ಸವಕ್ಕೆ ನಗರ ಸೇರಿದಂತೆ ತಾಲೂಕಿನ ಜನತೆ ಅಗತ್ಯ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಉತ್ಸವ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ತಿಳಿಸಲಾಗುವುದು ಎಂದರು.
ಹಬ್ಬದ ಹಿನ್ನೆಲೆಯಲ್ಲಿ ಮದ್ದೂರಮ್ಮ ದೇವಸ್ಥಾನಕ್ಕೆ ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ಮದ್ದೂರಮ್ಮ ದನಗಳ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಸೂಕ್ತ ಬಹುಮಾನ ನೀಡುವ ಜತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿದ್ದ ಸಾರ್ವಜನಿಕರು ಮದ್ದೂರು ಉತ್ಸವಕ್ಕೆ ಆಚರಿಸುವ ಸಂಬಂಧ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಸಭೆಯಲ್ಲಿ ಶ್ರೀ ಮದ್ದೂರಮ್ಮ ಟ್ರಸ್ಟ್ ಅಧ್ಯಕ್ಷ ಎಂ.ಸಿ.ನಾಗೇಶ್, ಕಾರ್ಯದರ್ಶಿ ಸೌಭಾಗ್ಯಮಹದೇವು, ಖಜಾಂಚಿ ಶಿವನಂಜು, ನಿರ್ದೇಶಕರಾದ ತಮ್ಮಣ್ಣ, ಮಹದೇವು, ಕೀರ್ತಿ, ಸುನಿಲ್, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯ ಎಂ.ಬಿ.ಸಚಿನ್, ಮುಖಂಡರಾದ ಮಮತಾ ಶಂಕರೇಗೌಡ, ಎಂ.ಡಿ.ಮಹಾಲಿಂಗಯ್ಯ, ಶರತ್ ಇತರರು ಇದ್ದರು.