ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಾಣವಾಗಲಿರುವ ಕನ್ನಡ ಭವನದ ನೀಲ ನಕಾಶೆ. 
ಮಂಡ್ಯ

ಕನ್ನಡ ಭವನಕ್ಕೆ ನೀಲಿ ನಕಾಶೆ ತಯಾರಿ: ನಾಡಿನ ವೈಭವ ಬಿಂಬಿಸುವಂತಿರಲು ಡಿಸಿ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗೆ ನಿರ್ಮಾಣ
  • 5.50 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ
ಮಂಡ್ಯ: ನಗರದಲ್ಲಿ ವೈಭವಯುತ ಹಾಗೂ ಯಶಸ್ವಿಯಾಗಿ ನಡೆದಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ನಿರ್ಮಾಣ ಮಾಡುತ್ತಿರುವ ಕನ್ನಡ ಭವನಕ್ಕೆ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ.
ಕನ್ನಡದ ಐಕ್ಯತೆಯ ಪ್ರತೀಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಮತ್ತು ನಾಡು, ನುಡಿಯ ಮೇಲಿನ ಅಭಿಮಾನವನ್ನು ಜನಮನದಲ್ಲಿ ಮೂಡಿಸುವ ಉದ್ದೇಶದಿಂದ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಮ್ಮೇಳನವು ಅಭೂತಪೂರ್ವ ಯಶಸ್ಸು ಕಂಡಿತ್ತು. ಅಂತೆಯೇ ನಾಡಿನ ಸಮಸ್ತರಿಂದ ಪ್ರಶಂಸೆಗೆ ಪಾತ್ರವಾಗಿತ್ತು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಭವನವನ್ನು ನಿರ್ಮಿಸಬೇಕು ಎಂಬ ಅಭಿಲಾಷೆಯನ್ನು ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ಹಾಗೂ ಜಿಲ್ಲೆಯ ಜನತೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಿದ ಸವಿನೆನಪಿಗಾಗಿ, ಸಮ್ಮೇಳನದಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹಣದ ಉಳಿತಾಯ 2.50 ಕೋಟಿ ರೂ ಹಾಗೂ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 3 ಕೋಟಿ ರೂ ಸೇರಿದಂತೆ ಒಟ್ಟು 5.50 ಕೋಟಿ ರೂ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಅಂಗವಾಗಿ, ಕಟ್ಟಡ ಕಾಮಗಾರಿಗೆ ಜ.30ರಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಫೆ.7ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಕನ್ನಡ ಭವನ ಕಟ್ಟಡದ ನೀಲ ನಕಾಶೆ, ರೂಪುರೇಷೆ ಹಾಗೂ ಇತರೆ ಸಂಬಂಧಿತ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಅಂತೆಯೇ ಕಟ್ಟಡವನ್ನು ಕನ್ನಡ ಭಾಷೆ, ಸಂಸ್ಮತಿ ಹಾಗೂ ನಾಡು, ನುಡಿಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದ್ದಾರೆ.