ಮಳವಳ್ಳಿ ಪಟ್ಟಣದ ಗಂಗಾಮತ ಬಡಾವಣೆಯಲ್ಲಿರುವ ಶತಮಾನ ಪೂರ್ವ ಸರ್ಕಾರಿ ಶಾಲೆ ಆವರಣದಲ್ಲಿ 12 ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ಕಾವ್ಯಾ ಕಾಳಪ್ಪ, ಉಮಾ, ಸೋಮಶೇಖರ್, ನಾಗರತ್ನಾ, ರಾಮಲಿಂಗಯ್ಯ, ಸಿ.ಪಿ.ರಾಜು, ದೊಡ್ಡಯ್ಯ, ವಿಶ್ವಾಸ್ ಇದ್ದರು
- ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ
- 90 ಕೋಟಿ ರೂ.ಗೂ ಹೆಚ್ಚು ಸಿಎಸ್‌ಆರ್ ಅನುದಾನದಲ್ಲಿ ಮೂಲ ಸೌಲಭ್ಯದ ಜತೆಗೆ ಮಲ್ಟಿಮೀಡಿಯಾ ಸೆಂಟರ್
ಮಳವಳ್ಳಿ: ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ ದೊರಕಿಸಬೇಕೆಂಬ ಸದುದ್ದೇಶದಿಂದ 90 ಕೋಟಿ ರೂ.ಗೂ ಹೆಚ್ಚು ಸಿಎಸ್‌ಆರ್ ಅನುದಾನದಲ್ಲಿ ಮೂಲ ಸೌಲಭ್ಯದ ಜತೆಗೆ ಮಲ್ಟಿಮೀಡಿಯಾ ಸೆಂಟರ್ ಆರಂಭಿಸುವ ಕುರಿತು ಕಾರ್ಯ ಯೋಜನೆ ರೂಪಿಸಿರುವುದಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ನಾರಾಯಣ ಹೃದಯಾಲಯ ವತಿಯಿಂದ ಸಿಎಸ್‌ಆರ್ ಅನುದಾನದಡಿ ಪಟ್ಟಣದ ಗಂಗಾಮತ ಬೀದಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 12 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಯ ಬಗ್ಗೆ ಬೊಟ್ಟು ಮಾಡಿ ತೋರದ ರೀತಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಬೇಕೆಂಬುದು ನನ್ನ ಕನಸಾಗಿದ್ದು, ಅದಕ್ಕೆ ಪೂರಕವಾಗಿ ಇನ್ನೆರಡು ತಿಂಗಳಲ್ಲಿ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಪಣತೊಡಲಾಗಿದೆ. ರಾಜ್ಯದಲ್ಲಿಯೇ ಹಿಂದುಳಿದ ತಾಲೂಕಾಗಿರುವ ಮಳವಳ್ಳಿಯಲ್ಲಿ ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ಬೆಂಡರವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೆಸ್ಲೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್‌ಆರ್ ಅನುದಾನದಡಿ 1.08 ಕೋಟಿ ರೂ. ಹಾಗೂ ಕಾಳಕೆಂಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ಲಕ್ಷ ರೂ. ಮತ್ತು ಪಟ್ಟಣದ ಕೋಟೆ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 84 ಲಕ್ಷ ರೂ.ವೆಚ್ಚದಲ್ಲಿ ಹೊಸ ಕೊಠಡಿಗಳು ಹಾಗೂ ನವೀಕರಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಕಾವ್ಯಾ ಕಾಳಪ್ಪ, ಬಿಇಒ ಉಮಾ, ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ರಾಮಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಮನ್‌ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್, ಮುಖಂಡರಾದ ಕಲ್ಕುಣಿ ದೇವರಾಜು, ದಿಲೀಪ್‌ಕುಮಾರ್, ಮುಖ್ಯ ಶಿಕ್ಷಕಿ ಮಹದೇವಮ್ಮ ಇತರರಿದ್ದರು.