ಮಂಡ್ಯದಲ್ಲಿ ಆಯೋಜಿಸಿದ್ದ ಬೂದನೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಹೆಲಿಕಾಪ್ಟರ್ ಪ್ರಯಾಣಕ್ಕೆ ದಾಖಲಾತಿ ಕಡ್ಡಾಯ: ಏಳು ನಿಮಿಷಕ್ಕೆ 3,800 ರೂ ನಿಗದಿ

ಪ್ರಮುಖ ಮುಖ್ಯಾಂಶಗಳು

  • ಬೂದನೂರು ಉತ್ಸವದ ಪೂರ್ವಭಾವಿ ಸಭೆ
  • ಡಿಸಿ ಡಾ.ಕುಮಾರ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಭಾಗಿ
ಮಂಡ್ಯ: ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆಯುವ ಎರಡು ದಿನದ ಉತ್ಸವದ ಅಂಗವಾಗಿ ಫೆ.20ರಿಂದ 22ರವರೆಗೆ ಹೆಲಿಟೂರಿಸಂ ಆಯೋಜಿಸಲಾಗಿದೆ. ಅದರಂತೆ ಹೆಲಿಕಾಪ್ಟರ್ ಪ್ರಯಾಣ ಮಾಡಲು ಬಯಸುವವರು ದಾಖಲಾತಿಯಾಗಿ ಗುರುತಿನ ಚೀಟಿ ಸಲ್ಲಿಸುವುದು ಕಡ್ಡಾಯವಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೂದನೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಹೆಲಿಟೂರಿಸಂ ಕುರಿತು ಚರ್ಚೆ ನಡೆಸಲಾಯಿತು. ಈ ಬಾರಿ ಉತ್ಸವದಲ್ಲಿ ಹೆಲಿಕಾಪ್ಟರ್ ಪ್ರಯಾಣ ಮೆರುಗು ನೀಡಲಾಗಿದೆ. ಅದರಂತೆ ಹೆಲಿಟೂರಿಸಂಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
ಹೆಲಿಟೂರಿಸಂ ಕುರಿತಂತೆ ಮಾಹಿತಿ ನೀಡಿದ ಅಧಿಕಾರಿಗಳು, ಟಿಕೆಟ್ ಕೌಂಟರ್ ಸ್ಥಾಪನೆ ಮಾಡಲಾಗುವುದು. ಅಂತೆಯೇ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಲು ಒಬ್ಬರು 3,800 ರೂಪಾಯಿಗಳನ್ನು ಪಾವತಿಸಬೇಕು. ಅದರಂತೆ ಒಬ್ಬರಿಗೆ 7 ನಿಮಿಷದ ಕಾಲಾವಕಾಶ ಇರಲಿದೆ. ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಹೆಲಿಕಾಪ್ಟರ್ ನಿಲ್ದಾಣದ ಸ್ಧಳದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಹೆಲಿಟೂರಿಸಂ ನಡೆಯುವ ದಿನದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ನೀಡಬೇಕು. ಅದರಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಗೃಹದ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೆಲಿಟೂರಿಸಂ ಮೂರು ದಿನ ಇರುವುದರಿಂದ ಸಾರ್ವಜನಿಕರ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಬೇಕು. ಮಾತ್ರವಲ್ಲದೆ ಲೈಟಿಂಗ್ ಸೌಲಭ್ಯ ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷಧ ಮತ್ತು ನುರಿತ ವೈದ್ಯರು ಹಾಗೂ ಅಧಿಕಾರಿಗಳನ್ನು ನಿಗದಿತ ಸ್ಥಳದಲ್ಲಿ ನೇಮಿಸಬೇಕು. ಮೂರು ದಿನವೂ ಆಂಬುಲೆನ್ಸ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಅಂತೆಯೇ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯಾವುದೇ ಅವಘಡ ಉಂಟಾಗದಂತೆ ಅಗ್ನಿಶಾಮಕ ದಳದವರು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗ್ನಿಶಾಮಕ ದಳದ ವಾಹನ ಯಾವಾಗಲೂ ಸ್ಧಳದಲ್ಲಿರಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಲು ಬರುವ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ಗಳನ್ನು ಪಡೆಯಬೇಕು. ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ನೀರಿನ ಬಾಟಲಿ, ಫೋನ್‌ಗಳನ್ನು ನಿಷೇಧಿಸಲಾಗಿರುತ್ತದೆ. ಅಂತೆಯೇ ಸಾರ್ವಜನಿಕರು ಹೆಲಿಪ್ಯಾಡ್‌ಗೆ ಹೋಗಲು ಇರುವ ಮಾರ್ಗದಲ್ಲಿ ತೆರಳುವಂತೆ ಸೂಚಿಸಬೇಕು. ಪ್ರಯಾಣಿಸಲು ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಅಗ್ನಿಶಾಮಕ ದಳದ ಅಧೀಕ್ಷಕ ರಾಘವೇಂದ್ರ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ನಿರ್ದೇಶಕ ಡಾ.ನರಸಿಂಹಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಡಾ.ವೀರಭದ್ರಪ್ಪ ಇತರರಿದ್ದರು.
ಚಿಕ್ಕಮಂಡ್ಯ ಸಮೀಪ ಪರಿಶೀಲನೆ: ಹೆಲಿಟೂರಿಸಂ ಸೇವೆ ಆರಂಭಿಸುವ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪ ಸ್ಥಳ ಗುರುತು ಮಾಡಲಾಗಿದೆ. ಭದ್ರತೆ, ಸಾರ್ವಜನಿಕ ಸುರಕ್ಷತೆ, ಸಂಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಸಂಬಂಧಿಸಿದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ.