ಮಂಡ್ಯದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. 
ಮಂಡ್ಯ

ಶಿಕ್ಷಕರು ತಮ್ಮ ಜವಾಬ್ದಾರಿ ನಿರ್ವಹಿಸಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರ್ತವ್ಯ ನಿರ್ವಹಿಸಬೇಕು
  • ನಗರದಲ್ಲಿ ಶಾಲಾರಂಭದ ಪೂರ್ವಭಾವಿ ಸಭೆ
ಮಂಡ್ಯ: ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು. ಜತೆಗೆ ತಮ್ಮ ಜವಾಬ್ದಾರಿಗಳನ್ನು ಪಾಲಿಸಬೇಕು. ಅಂತೆಯೇ ಎಲ್ಲ ಶಿಕ್ಷಕರು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ನಗರದ ಜಿಪಂ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಿಜಿಸ್ಟರ್‌ನಲ್ಲಿ ವಿವರವನ್ನು ನಮೂದಿಸುವುದು ಕಡ್ಡಾಯ ಎಂದರು.
ಶಾಲಾ ಸ್ವಚ್ಛತೆ, ಕಟ್ಟಡ ಸುರಕ್ಷತೆ, ಶಾಲಾ ಹಂತದಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಶಿಕ್ಷಕರಿಗೆ ಕಾರ್ಯಹಂಚಿಕೆ, ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ, ದಾಖಲಾತಿ ಆಂದೋಲನ, ಒ.ಒ.ಎಸ್.ಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು. ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ, ಅಕ್ಷರ ದಾಸೋಹ ಸಿದ್ಧತೆ, ಪ್ರತಿ ಶಾಲೆಗಳ ಮೂಲ ಸೌಕರ್ಯಗಳ ಪರಿಶೀಲನೆ ನಡೆಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲಾ ತೋಟಗಳ ಅಭಿವೃದ್ಧಿ, ಮಕ್ಕಳಿಗೆ ಪೌಷ್ಟಿಕ ತರಕಾರಿ, ಸೋಪ್ಪು ಬೆಳೆಸುವ ಕಾರ್ಯಕ್ರಮಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು. ಶಾಲಾ ಶೌಚಗೃಹಗಳ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲಿಗೆ ಅಡುಗೆ ಮನೆಯ ಸ್ವಚ್ಛತೆ, ಆಹಾರಗಳ ಗುಣಮಟ್ಟವನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾವಾರು ಕಡಿಮೆ ಫಲಿತಾಂಶ ಪಡೆದ ತಾಲೂಕುಗಳು ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಬೇಕಾದ ಪೂರ್ವ ಸಿದ್ಧತಾ ಕ್ರಮಗಳನ್ನು ಅನುಸರಿಸಬೇಕು. ಎಲ್ಲ ತಾಲೂಕುಗಳು ಮೈಕ್ರೋ ಅನಾಲಿಸಿಸ್ ಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ತಿಂಗಳಿಗೊಮ್ಮೆ ನಡೆಯುವ ಸಭೆಗೆ ಖಾಸಗಿ, ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಹಾಸ್ಟೆಲ್‌ನ ವಾರ್ಡನ್‌ಗಳು ಕಡ್ಡಾಯವಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಜೂ.9ರೊಳಗೆ ಡಯಟ್‌ನಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿ, ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹಾಗೂ ಡಯಟ್ ಪ್ರಾಂಶುಪಾಲರಿಗೆ ತಿಳಿಸಿದ ಜಿಪಂ ಸಿಇಒ, ಕೆಎಎಎಂಸ್ ಮತ್ತು ಇತರೆ ದತ್ತಾಂಶಗಳ ಡಿಜಿಟಲೀಕರಣ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮಧ್ಯಾಹ್ನ ಉಪಹಾರ ಯೋಜನೆಯನ್ನು ಗುಣಮಟ್ಟದಿಂದ ಅನುಷ್ಠಾನಗೊಳಿಸಿ. ಬಹುಮುಖ್ಯವಾಗಿ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು.
ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗಳ ಕುರಿತು ಚರ್ಚಿಸಿ, ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ತಾಲೂಕುವಾರು ವಿಭಜನೆ ಮಾಡಿಕೊಂಡು ಕಟ್ಟಡಗಳ ವ್ಯವಸ್ಥೆ ಕುರಿತು ಜೂ.3ರೊಳಗೆ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ ಸಿಇಒ ಕೆ.ಆರ್.ನಂದಿನಿ, ಶಾಲೆಯ ಮುಖ್ಯೋಪಾಧ್ಯಾಯರು, ಇಂಜಿನಿಯರ್‌ಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಖುದ್ದು ಹಾಜರಿದ್ದು ಕೊಠಡಿಗಳ ಸಮಸ್ಯೆಗಳ ಮಾಹಿತಿಯನ್ನು ನೀಡುವಂತೆ ತಿಳಿಸಿದರು.
ಕಲಿಕಾ ಮಿತ್ರ ಸಿದ್ಧಪಡಿಸಿ: ಕಲಿಕಾ ಮಿತ್ರ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಮಕ್ಕಳಿಗೆ ಲಭ್ಯವಾಗುವಂತೆ ಸಿದ್ಧಪಡಿಸಿ ಹಾಗೂ ಇತರೆ ವಿಷಯಗಳ ಕುರಿತು ಸಮಗ್ರ ಮಾಹಿತಿಯುಳ್ಳ ಹಾಗೂ ಮಕ್ಕಳಿಗೆ ಸುಲಭವಾಗಿ ಅರ್ಥೈಸಿಕೊಳ್ಳುವ ವಿಡಿಯೋಗಳನ್ನು ಸಿದ್ಧಪಡಿಸುವಂತೆ ಡಯಟ್ ಪ್ರಾಂಶುಪಾಲರಿಗೆ ಸಿಇಒ ಸೂಚನೆ ನೀಡಿದರು.
ಶಿಕ್ಷಕರಿಗೆ ಕಾರ್ಯಹಂಚಿಕೆ ನಿರ್ವಹಣೆ, ಶೈಕ್ಷಣಿಕ ದಾಖಲೆಗಳ ಅನುಮೋದನೆ, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಮೂಲಸೌಲಭ್ಯ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ವಿಶೇಷ ದಾಖಲಾತಿ ಆಂದೋಲನ, ಶಾಲೆ ಬಿಟ್ಟ ಮಕ್ಕಳನ್ನು ಮರು ದಾಖಲಾತಿ ಮಾಡಿಸುವುದು, ಪಾಲಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮೂಡಿಸುವುದು ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಡಿಡಿಪಿಐ ಲೋಕೇಶ್, ಡಯಟ್ ಪ್ರಾಂಶುಪಾಲ ಯೋಗೇಶ್ ಇತರರಿದ್ದರು.