ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಮಾ.23ರಿಂದ ಏ.5ರವರೆಗೆ ವೈರಮುಡಿ ಬ್ರಹ್ಮೋತ್ಸವ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪೂರ್ವಸಿದ್ಧತಾ ಸಭೆ
  • ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸೂಚನೆ ಸೂಚನೆ
  • ವಿಶೇಷ ದೀಪಾಲಂಕಾರ ಮಾಡಿಸಲು ನಿರ್ದೇಶನ
ಮಂಡ್ಯ: ಇತಿಹಾಸ ಪ್ರಸಿದ್ಧ ಮೇಲುಕೋಟೆಯಲ್ಲಿ ಮಾ.23ರಿಂದ ಏ.5ರವರೆಗೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದೆ. ಮಾ.28ರಂದು ವೈರಮುಡಿ ಕಿರೀಟಧಾರಣೆ ಮತ್ತು ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವೈರಮುಡಿ ಬ್ರಹ್ಮೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್‌ನಲ್ಲಿ ಬೇಸಿಗೆ ಹೆಚ್ಚಾಗಿರುವುದರಿಂದ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ. ಹಾಲಿ ಇರುವ ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಿ ಎಂದು ಸೂಚನೆ ನೀಡಿದರು.
ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಜನಸಂದಣಿ ಹೆಚ್ಚಿರುವ ಸ್ಥಳದಲ್ಲಿ ಈಗಾಗಲೇ ಸಿ.ಸಿ ಕ್ಯಾಮೆರಾ ವ್ಯವಸ್ಥೆ ಇದೆ. ಆದಾಗ್ಯೂ ಅಗತ್ಯ ಇರುವ ಕಡೆ ಹೆಚ್ಚುವರಿ ಸಿ.ಸಿ ಕ್ಯಾಮೆರಾ ಅಳವಡಿಸಿ. ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ. ಕಲ್ಯಾಣಿ ಸಮೀಪ ನುರಿತ ಈಜು ಪಡೆ, ಅಗ್ನಿಶಾಮಕ ಸಿಬ್ಬಂದಿ ನಿಯೋಜಿಸಿ. ಚರಂಡಿ ವ್ಯವಸ್ಥೆ ಸರಿಪಡಿಸಿ ಸ್ವಚ್ಛತೆ ಕಾಪಾಡಿ. ಆಂಬುಲೆನ್ಸ್, ಔಷಧದ ವ್ಯವಸ್ಥೆ ಸರಿಯಾಗಿರಬೇಕು. ಎಲ್ಲ ವಿದಧ ವೈದ್ಯರು ಕಡ್ಡಾಯವಾಗಿ ನಿಗದಿಪಡಿಸಿದ ಸ್ಥಳದಲ್ಲಿ ಇರಬೇಕು. ಭಕ್ತರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ನೀರು ಪೂರೈಕೆ ಮಾಡಬೇಕು ಎಂದು ಹೇಳಿದರು.
ಮೇಲುಕೋಟೆ ಕಲ್ಯಾಣ, ಬಸ್ ನಿಲ್ದಾಣ, ದೇವಾಲಯದ ಬಳಿ ಬಯೋ ಶೌಚಗೃಹ ನಿರ್ಮಿಸಬೇಕು. ರಸ್ತೆಗಳ ದುರಸ್ತಿ ಮಾಡಿಸಬೇಕು. ವಿವಿಧ ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ. ಪಾರ್ಕಿಂಗ್‌ನಿಂದ ದೇವಾಲಯಕ್ಕೆ ಭಕ್ತರು ಸಂಚರಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ. ಮಂಗಳವಾದ್ಯ, ನಾದ ಸ್ವರ ಹಾಗೂ ವಿವಿಧ ಕಲಾ ತಂಡಗಳನ್ನು ವೈರಮುಡಿ ಬ್ರಹ್ಮೋತ್ಸವದಲ್ಲಿ ನಿಯೋಜಿಸಿ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವೈರಮುಡಿ ಬ್ರಹ್ಮೋತ್ಸವ ಪ್ರಾರಂಭವಾಗಿ ಮುಗಿಯುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿ. ಬೀದಿ ದೀಪಗಳ ದುರಸ್ತಿಗೊಳಿಸಿ. ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗ ನರಸಿಂಹ ಸ್ವಾಮಿ ದೇವಾಲಯ ಹಾಗೂ ದೇವಾಲಯದ ವ್ಯಾಪ್ತಿಯ ಪ್ರಮುಖ ಮಂಟಪ, ಕಲ್ಯಾಣಿಯಲ್ಲಿ ವಿಶೇಷ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಅತಿ ಮುಖ್ಯ. ಆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಬೇಕು. ವೈರಮುಡಿ ಬ್ರಹ್ಮೋತ್ಸವಕ್ಕೆ ಭೇಟಿ ನೀಡುವ ಗಣ್ಯರು ಮತ್ತು ಅತಿ ಗಣ್ಯರ ವಿಚಾರದಲ್ಲಿ ಕಟ್ಟುನಿಟ್ಟಾಗಿ ಶಿಷ್ಟಾಚಾರ ಪಾಲನೆಯಾಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಮುಜರಾಯಿ ತಹಸೀಲ್ದಾರ್ ತಮ್ಮೆಗೌಡ, ಪಾಂಡವಪುರ ಇಒ ವೀಣಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.