ಕಿಕ್ಕೇರಿಯಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ಅಲ್ಲಾಹುನ ಪ್ರಾರ್ಥಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿದರು.  
ಮಂಡ್ಯ

ಕಿಕ್ಕೇರಿಯ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ

ಕಿಕ್ಕೇರಿ: ಮುಸ್ಲಿಮರು ಹೊಸ ಉಡುಗೆ ತೊಡುಗೆ ತೊಟ್ಟು ಜಾಮೀಯಾ ಮಸೀದಿಯೊಳಗೆ ಪ್ರಾರ್ಥನೆ ಮಾಡುವುದರೊಂದಿಗೆ ಬಕ್ರೀದ್ ಹಬ್ಬವನ್ನು ಸಂಭ್ರಮಿಸಿದರು.
ಗುರುವಾರ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತದನಂತರ ಸಾಮೂಹಿಕವಾಗಿ ಅಲಾಹುನ ಪ್ರಾರ್ಥಿಸುತ್ತ ಕೋಟೆ ಗಣಪತಿ, ಆಂಜನೇಯ ಬೀದಿ, ರಥಬೀದಿ, ಮಂದಗೆರೆ ರಸ್ತೆ ಮೂಲಕ ಮೆರವಣಿಗೆ ಸಾಗಿದರು. ಅಂತಿಮವಾಗಿ ಹೊರವಲಯದಲ್ಲಿನ ಈದ್ಗಾ ಮೈದಾನದಲ್ಲಿ ಜಮಾಯಿಸಿದರು. ಹಿರಿಯರೊಂದಿಗೆ ಪುಟಾಣಿ ಮಕ್ಕಳು ಮೆರವಣಿಗೆಯಲ್ಲಿ ಜತೆಗೂಡಿ ಖುಷಿಯಿಂದ ಅಲ್ಲಾಹುನ ಪ್ರಾರ್ಥಿಸುತ್ತ ಹೆಜ್ಜೆಹಾಕಿದರು.
ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಧರ್ಮಗುರು ಫಕ್ರಿಯ ಆಲಂ ಅವರು ಧರ್ಮಗ್ರಂಥ ಕುರಾನ್ ಪಠಣೆ ಮಾಡಿದರು. ಅಲ್ಲಾಹುನ ಅಣತಿಯಂತೆ ಸೌಹಾರ್ದತೆಗೆ ಮುಂದಾಗಬೇಕು. ಎಲ್ಲ ಧರ್ಮದ ಸಾರ ಶಾಂತಿಯಾಗಿದೆ. ಮಾನವ ಜನ್ಮ ಪವಿತ್ರವಾಗಿದೆ. ಶಾಂತಿ, ನೆಮ್ಮದಿ, ದಾನ- ಧರ್ವಕ್ಕೆ ಮುಂದಾಗಬೇಕು. ತ್ಯಾಗ, ಪ್ರೀತಿ, ಭ್ರಾತೃತ್ವ, ಬಲಿದಾನದ ಸಂಕೇತವಾದ ಹಬ್ಬದಂದು ಬಡವರಿಗೆ ಕೈಯಲ್ಲಿ ಅನುಕೂಲವಾದಷ್ಟು ದಾನ ಮಾಡುವ ಪ್ರವೃತ್ತಿ ಉಳ್ಳವರು ಪಾಲಿಸಿಕೊಂಡು ಮಾನವತೆ ಮೆರೆಯಬೇಕು. ನಮ್ಮ ಧರ್ಮಗ್ರಂಥದಲ್ಲಿರುವುದೇ ಇದರ ಸಾರ, ಸಂದೇಶವಾಗಿದೆ. ಮತ್ತೊಬ್ಬರ ನೋವಿಗೆ ಸ್ಪಂದಿಸಿದರೆ ಅಲ್ಲಾಹು ಮೆಚ್ಚಲಿದ್ದಾನೆ ಎಂದು ಸಂದೇಶ ನುಡಿದರು.
ಹೊಸ ಉಡುಗೆ ತೊಡುಗೆ ಧರಿಸಿ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಮಂದಗೆರೆ ಹಾಗೂ ಆನೆಗೊಳ ಗ್ರಾಮದಲ್ಲಿಯೂ ಮುಸ್ಲಿಮರು ಹೊಸಬಟ್ಟೆ ತೊಟ್ಟು ಅಲ್ಲಾಹುನ ಪ್ರಾರ್ಥಿಸುವ ಮೂಲಕ ಹಬ್ಬದ ಸಂಭ್ರಮಾಚರಿಸಿದರು.