ಬಸರಾಳು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಲು ಮಹಿಳೆಯರು ಆಗಮಿಸಿದರು.  
ಮಂಡ್ಯ

ಮಳೆಗಾಗಿ ಪ್ರಾರ್ಥಿಸಿ ಬಸರಾಳಿನಲ್ಲಿ ಪೂಜೆ: ಕೊಲ್ಲಾಪುರದಮ್ಮ ದೇವಿಗೆ ಮೊರೆ ಹೋದ ಗ್ರಾಮಸ್ಥರು

ಪ್ರಮುಖ ಮುಖ್ಯಾಂಶಗಳು

  • ಅನ್ನ ತಯಾರಿಸಿ ನೈವೇದ್ಯ ಸಮರ್ಪಣೆ
  • ಸಂಜೆ ಮಣ್ಣಿನ ಮೂರ್ತಿಯನ್ನು ವಿಸರ್ಜನೆ
ಮಂಡ್ಯ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಬಸರಾಳು ಗ್ರಾಮದಲ್ಲಿ ಗ್ರಾಮಸ್ಥರು ಕೊಲ್ಲಾಪುರದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಿಂದ ಛತ್ರಿ, ಚಾಮರ, ತ್ರಿಶೂಲ, ಕೊಂಬು ಕಹಳೆ, ತಮಟೆ, ಮಂಗಳವಾದ್ಯ ಸಮೇತ ಗ್ರಾಮದ ಜನರು ಊರ ಹೊರಭಾಗದಲ್ಲಿರುವ ಗಿಂಡಿ ಆಲದ ಮರದ ಬಳಿಗೆ ತೆರಳಿದರು. ನಂತರ ಚಿಕ್ಕಕೆರೆಯಿಂದ ಶುದ್ಧವಾಗಿ ತಂದಿದ್ದ ಮಣ್ಣಿನಿಂದ ಕೊಲ್ಲಾಪುರದಮ್ಮ ದೇವಿಯ ಮೂರ್ತಿ ನಿರ್ಮಿಸಿ ಅರಿಶಿನ ಕುಂಕುಮದಿಂದ ಅಲಂಕರಿಸಿ ಹಸಿರು ಚಪ್ಪರದಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಹೋಮ ಅವನಾದಿಗಳನ್ನು ನೆರವೇರಿಸಿ ತಾಯಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಮಣ್ಣಿನಿಂದ ಕೊಲ್ಲಾಪುರದಮ್ಮ ದೇವಿಯ ಮೂರ್ತಿ ನಿರ್ಮಿಸಿರುವುದು.

ಗ್ರಾಮದ ಪ್ರತಿ ಮನೆಯಿಂದಲೂ ಮಹಿಳೆಯರು, ಹೆಣ್ಣು ಮಕ್ಕಳು ಮಡಿಯಿಂದ ಶುದ್ಧವಾಗಿ ತಂಬಿಟ್ಟಿನ ಆರತಿ, ಮಳೆ ಆರತಿಗಳೊಂದಿಗೆ ಕೊಲ್ಲಾಪುರದಮ್ಮ ದೇವಿಗೆ ಆರತಿ ಸಲ್ಲಿಸಿ ಮಳೆ ಬೀಳುವಂತೆ ಪ್ರಾರ್ಥಿಸಿಕೊಂಡರು. ಕೆಲ ಭಕ್ತರು ಊರ ಹೊರ ಭಾಗದ ಹೊಲದಲ್ಲಿ ಮಣ್ಣಿನಿಂದ ಒಲೆಗಳನ್ನು ನಿರ್ಮಿಸಿ ಮಡಿಕೆಯಿಂದ ದೇವಿಗೆ ಅನ್ನ ತಯಾರಿಸಿ ನೈವೇದ್ಯವಾಗಿ ಸಮರ್ಪಿಸಿದರು. ಸಂಜೆ ಸೂರ್ಯಾ ಮುಳುಗುವವರೆಗೂ ಪೂಜೆ ಸಲ್ಲಿಸಿದ ಭಕ್ತರು, ನಂತರ ಗ್ರಾಮದ ಚಿಕ್ಕಕೆರೆಯಲ್ಲಿ ಕೊಲ್ಲಾಪುರದಮ್ಮ ದೇವಿಯ ಮಣ್ಣಿನ ಮೂರ್ತಿಯನ್ನು ವಿಸರ್ಜಿಸಿ ಪೂಜೆ ನೆರವೇರಿಸಿದರು.
ಹಿಂದಿನಿಂದಲೂ ಕಾಲ ಕಾಲಕ್ಕೆ ಮಳೆ ಆಗದಿದ್ದಾಗ ಗ್ರಾಮದಲ್ಲಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಅದೇ ರೀತಿ ಕೊಲ್ಲಾಪುರದಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.