ಬೆಳಗೊಳ ಗ್ರಾಮದ ಬಲಮುರಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ನಂದೀಶ್, ನಂಜುಂಡಾಚಾರ್, ಡಾ.ಪ್ರಭಾ ಇದ್ದರು.
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಲಮುರಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬುಧವಾರ ಹೋಬಳಿ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಂದೀಶ್ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕಡಿಮೆ ಮಾಡಿ ಕೇವಲ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಟಿವಿ, ಮೊಬೈಲ್ ವ್ಯಾಮೋಹ ಹೆಚ್ಚಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಪಾಲಕರು ಗಮನಹರಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಳಗೊಳ ಹೋಬಳಿ ಇಆರ್‌ಸಿ ನಂಜುಂಡಾಚಾರ್ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆ ಅಗತ್ಯ. ಶಿಕ್ಷಕರು ಮಕ್ಕಳ ಪ್ರತಿಭೆ ಹೊರತರಲು ಪ್ರೋತ್ಸಾಹ ನೀಡಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿದಂತೆ 21 ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಡಾ.ಪ್ರಭಾ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮುಖ್ಯಶಿಕ್ಷಕ ಡಿ.ಎಂ.ಅಭಿಲಾಷ್, ಗುರುಕುಲ ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ಹರ್ಷ ಜೋಶಿ, ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.