ಮಂಡ್ಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.
- ಮಕ್ಕಳಿಗೆ ಸಾಧನೆ ಮಾಡುವ ಗುರಿ ಇರಲಿ
- ಶಾಸಕ ರವಿಕುಮಾರ್ ಗಣಿಗ ಸಲಹೆ
- ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ
ಮಂಡ್ಯ: ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಸಂತ ಜೋಸೆಫರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಶ್ರದ್ಧೆಯಿಂದ ಶಿಕ್ಷಣ ಕಲಿತು ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಜನ ಸೇವಕರಾಗಿ ರಾಜಕೀಯ ಪ್ರವೇಶ ಮಾಡಬೇಕು. ಭಾರತ ಯುವ ಪೀಳಿಗೆಯ ಮೇಲೆ ನಿಂತಿದೆ. ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಗುರಿ ಜತೆಗೆ ಶ್ರಮ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ದೊರೆಯಬೇಕು. ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ ಅಡಕವಾಗಿರುತ್ತದೆ. ಅಂತಹ ಮಕ್ಕಳಿಗೆ ಸೂಕ್ತ ವೇದಿಕೆ ಸಿಗದಿದ್ದರೆ ಅವರ ಪ್ರತಿಭೆ ಕಮರಿ ಹೋಗುತ್ತದೆ. ಹಾಗಾಗಿ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಮಕ್ಕಳಿಗೆ ಜೀವನದ ಮೌಲ್ಯಗಳ ಕುರಿತು ಶಿಕ್ಷಕರು ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಬಾರಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಜಿಲ್ಲೆಯ ವಿದ್ಯಾರ್ಥಿಗಳು ಕಾಪಾಡಿಕೊಂಡಿದ್ದಾರೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಪ್ರತಿಭಾ ಕಾರಂಜಿ ವೈಯಕ್ತಿಕವಾಗಿ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಕಲಿಕಾ ದಿನಗಳಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸಿ ವಿವಿಧ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ. ಪ್ರತಿಭೆಗಳ ಸಮ್ಮಿಲನ ಮತ್ತು ಅನಾವರಣಕ್ಕೆ ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆ. ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಇರುತ್ತವೆ. ಅದನ್ನು ಗುರುತಿಸುವ ಕೆಲಸವನ್ನು ಪಾಲಕರು ಮತ್ತು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಪ್ರತಿಭೆಯನ್ನು ಗುರುತಿಸಿದಾಗ ಮಾತ್ರ ಅವರು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಹೇಳಿದರು.
ಡಿಡಿಪಿಐ ಜಿ.ಎ.ಲೋಕೇಶ್, ಡಯಟ್ ಉಪ ನಿರ್ದೇಶಕ ಎಚ್.ಎನ್.ಯೋಗೇಶ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪುಟ್ಟರಾಜಯ್ಯ ಇತರರಿದ್ದರು.