ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಗೆ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ ರೈತರ ಮನವೊಲಿಸಿದ ಸಂದರ್ಭ. 
ಮಂಡ್ಯ

ಮೋಟಾರ್‌ಗೆ ವಿದ್ಯುತ್ ಸಂಪರ್ಕ ಕಡಿತ

ಲೋಕೇಶ್ ಮನು. ಡಿ
ಪಾಂಡವಪುರ: ತಾಲೂಕಿನ ಐತಿಹಾಸಿಕ ತೊಣ್ಣೂರು ಕೆರೆಯ ಹಿನ್ನೀರಿಗೆ ಅಕ್ರಮವಾಗಿ ಅಳವಡಿಸಿದ್ದ ನೀರೆತ್ತುವ ಮೋಟಾರ್‌ಗಳನ್ನು ತಹಸೀಲ್ದಾರ್ ಬಸವರೆಡ್ಡಪ್ಪರೋಣದ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವ ಪ್ರಯತ್ನ ನಡೆಸಿದ್ದು, ಈ ವೇಳೆ ರೈತರಿಂದ ವಿರೋಧ ವ್ಯಕ್ತವಾಯಿತು.
ಬೇಸಿಗೆ ಹಿನ್ನೆಲೆಯಲ್ಲಿ ತೊಣ್ಣೂರು ಕೆರೆಯ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಎಂಬ ಅಧಿಕಾರಿಗಳ ವರದಿಯನ್ವಯ ತಹಸೀಲ್ದಾರ್ ನೇತೃತ್ವದ ಟಾಸ್ಕ್‌ಫೋರ್ಸ್ ತಂಡ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಪಂಪ್‌ಸೆಟ್ ತೆರವು ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಕೆರೆಯ ಹಿನ್ನೀರಿನ ವ್ಯಾಸ್ತಿಯ ಹಲವು ಗ್ರಾಮಗಳ ರೈತರು ಅಂದಾಜು 330ಕ್ಕೂ ಅಧಿಕ ಮೋಟಾರ್‌ಗಳನ್ನು ಅಳವಡಿಸಿ ಬೆಳೆಗಳಿಗೆ ನೀರೆತ್ತಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಅಕ್ರಮ ಮೋಟಾರ್‌ಗಳನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದರು. ನಾವು ಹಲವು ವರ್ಷಗಳಿಂದಲೂ ಕೆರೆಗೆ ಮೋಟಾರ್ ಅಳವಡಿಸಿಕೊಂಡು ನೀರೆತ್ತಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಇದೇ ನಮ್ಮ ಬದುಕಿಗೆ ಆಧಾರವಾಗಿದೆ. ಹೀಗಾಗಿ ಮೋಟಾರ್ ತೆರವುಗೊಳಿಸಬೇಡಿ. ತೆರವುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಅವರು ಕೆರೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಮಳೆಯಾಗದೆ ಇದ್ದರೆ ನೀರು ಖಾಲಿಯಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೂ ರೈತರು ಒಪ್ಪದ ಹಿನ್ನೆಲೆಯಲ್ಲಿ ಮೋಟಾರ್‌ಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್ ಕಡಿತಗೊಳಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳು 11ಕ್ಕೂ ಅಧಿಕ ಮೋಟಾರ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವಾಪಸ್ಸಾದರು.
ಬೇಸಿಗೆಯಿಂದಾಗಿ ತೊಣ್ಣೂರು ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕೆರೆಯಿಂದ 34 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕಡಿಮೆಯಾಗದರೆ ತೊಂದರೆಯಾಗಲಿದೆ ಎಂಬ ಅಧಿಕಾರಿಗಳು ಕೊಟ್ಟ ವರದಿ ಹಿನ್ನೆಲೆಯಲ್ಲಿ ಕೆರೆಯ ಹಿನ್ನೀರಿನಲ್ಲಿ ಅಕ್ರಮವಾಗಿ ಅಳವಡಿಕೆ ಮಾಡಲಾಗಿರುವ ಮೋಟಾರ್‌ಗಳನ್ನು ಗುರುತಿಸಿ ತೆರವುಗೊಳಿಸಲು ಮುಂದಾದಾಗ ರೈತರು ವಿರೋಧಿಸಿದರು. ರೈತರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಇರುವುದರಿಂದ ಈಗಾಗಲೇ ಅಧಿಕಾರಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಬಸವರೆಡ್ಡಪ್ಪರೋಣದ ವಿಜಯವಾಣಿಗೆ ತಿಳಿಸಿದರು.