ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಹೋರಾಟಗಾರರೊಂದಿಗೆ ಆಗಮಿಸಿದ ರೈತ ನಾಯಕ ಕೆ.ಎಸ್.ನಂಜುಂಡೇಗಡ ಕೆ.ಆರ್.ಸಾಗರ ಜಲಾಶಯದಿಂದ ನಾಲೆಗಳಿಗೆ ಮತ್ತೊಂದು ಕಟ್ಟು ನೀರು ಹರಿಸಲು ಸರ್ಕಾರ ಕ್ರಮವಹಿಸುವಂತೆ ಪತ್ರ ಬರೆಯಲು ತಹಸೀಲ್ದಾರ್ ಚೇತನಾ ಯಾದವ್ ಅವರನ್ನು ಒತ್ತಾಯಿಸಿದರು. ಬಿ.ಸಿ.ಕೃಷ್ಣೇಗೌಡ, ಮಹದೇವು ಇತರರಿದ್ದರು.  
ಮಂಡ್ಯ

ನಾಲೆಗಳಿಗೆ ಮತ್ತೊಂದು ಕಟ್ಟು ನೀರುಹರಿಸಿ

ಪ್ರಮುಖ ಮುಖ್ಯಾಂಶಗಳು

  • ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಗ್ರಹ
ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ಕೆ.ಆರ್.ಸಾಗರ ಜಲಾಶಯದಿಂದ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಎಲ್ಲ ನಾಲೆಗಳಿಗೆ ತಕ್ಷಣ ಮತ್ತೊಂದು ಕಟ್ಟು ನೀರು ಹರಿಸಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಲಾಗುವುದು ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ಬುಧವಾರ ಭೂಮಿತಾಯಿ ಹೋರಾಟ ಸಮಿತಿಯ ಕಾರ್ಯಕರ್ತರೊಂದಿಗೆ ಆಗಮಿಸಿ ತಹಸೀಲ್ದಾರ್ ಚೇತನಾ ಯಾದವ್ ಅವರ ಬಳಿ ನೀರು ಹರಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಚರ್ಚಿಸಿ ಮಾತನಾಡಿದರು.
ಈ ಭಾರಿ ಮುಂಗಾರು ನೀರಿಕ್ಷಿತ ಸಮಯದಲ್ಲಿ ಆಗದ ಹಿನ್ನೆಲೆ ಸಮಸ್ಯೆಯಾಗುವ ಆತಂಕ ಎದುರಾಗಿದ್ದು, ಕಳೆದ 8-9 ತಿಂಗಳಿನಿಂದ ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ಅಣೆಕಟ್ಟೆಯಲ್ಲಿನ ನೀರನ್ನು ಬೆಂಗಳೂರು, ಮೈಸೂರು, ಮಂಡ್ಯದಂತಹ ನಗರ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಸಲು ಸಲುವಾಗಿ ಉಳಿಸಿಕೊಳ್ಳುವ ಕಾರಣ ನೀಡುತ್ತಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಕೃಷಿ ಮತ್ತು ಜನರ ಕುಡಿಯುವ ನೀರಿಗೂ ಸಮನಾಗಿ ಪೂರೈಸಿ ರೈತರ ಹಿತ ಕಾಯಬೇಕು. ಒಂದು ವೇಳೆ ಮಲತಾಯಿ ಧೋರಣೆ ತೋರಿದಲ್ಲಿ ಈ ಬಗ್ಗೆ ಭೂಮಿತಾಯಿ ಹೋರಾಟ ಸಮಿತಿಯ ಹೋರಾಟಗಾರರು ಹೆದ್ದಾರಿ ತಡೆಯೊಂದಿಗೆ ಕಾನೂನು ಭಂಗ ಚಳುವಳಿ ನಡೆಸಲಾಗುವುದು ಎಚ್ಚರಿಸಿದರು.
ತಾಲೂಕಿನ ಮಹದೇವಪುರ ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂ ರಹಿತ ರೈತಾಪಿ ವರ್ಗಕ್ಕೆ ಅಕ್ರಮ-ಸಕ್ರಮ ಯೋಜನೆಯಡಿ ಖಾತೆ, ಕಂದಾಯ ಮಾಡಿ ದಾಖಲೆಗಳ ಒದಗಿಸಿ ಜೀವನ ಕಲ್ಪಿಸಲು ಈ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ. ಶೀಘ್ರವೇ ತಾಲೂಕಿನ ರೈತಾಪಿ ಜನರ ಸಮಸ್ಯೆಗಳು ಬಗೆಹರಿಯದಿದ್ದರೆ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಭೂಮಿ ತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಖಜಾಂಚಿ ಮಹದೇವು, ಸದಸ್ಯರುಗಳಾದ ರವಿಲಕ್ಷ್ಮಣ, ಶಿವಣ್ಣ, ಮಹಾಲಿಂಗು, ಶಿವರಾಜು, ಜಯರಾಮೇಗೌಡ, ಮಂಜುನಾಥ್, ಚಾಮರಾಜು, ಅಚ್ಚಪ್ಪನಕೊಪ್ಪಲು ಕೃಷ್ಣ, ಮೇಳಾಪುರ ದೇವರಾಜು,ದರಸಗುಪ್ಪೆ ಸುರೇಶ್ ಇತರರು ಈ ವೇಳೆ ಭಾಗಿಯಾಗಿದ್ದರು.